* ಆಫ್ರಿಕಾ ಖಂಡದ ಅಂಗೋಲಾ ದೇಶದ ಸೇನೆಯ ಆಧುನೀಕರಣಕ್ಕೆ ಭಾರತವು 20 ಕೋಟಿ ಡಾಲರ್ (ಸುಮಾರು ₹1,690 ಕೋಟಿ) ಸಾಲ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರಕಟಿಸಿದ್ದಾರೆ. * ಅಂಗೋಲಾ ಅಧ್ಯಕ್ಷ ಜಾವೊ ಮ್ಯಾನುಯೆಲ್ ಗೊನ್ಸಾಲ್ವೆಸ್ ಲಾರೆನ್ಸೊ ಜತೆಗೆ ಇಲ್ಲಿ ನಡೆದ ಮಾತುಕತೆ ಬಳಿಕ ಅವರು ಈ ಘೋಷಣೆ ಮಾಡಿದ್ದಾರೆ.* ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಕ್ಷೇತ್ರವೂ ಸೇರಿದಂತೆ ಒಟ್ಟಾರೆ ದ್ವಿಪಕ್ಷೀಯ ಸಂಬಂಧ ಬಲಪಡಿಸುವುದರ ಬಗ್ಗೆ ಉಭಯ ದೇಶಗಳ ನಾಯಕರು ಚರ್ಚಿಸಿದರು.* ಲಾರೆನ್ಸೊ ಅವರ ಭಾರತ ಭೇಟಿಯು ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ದಿಕ್ಕನ್ನು ನೀಡುವುದಲ್ಲದೆ ಭಾರತ-ಆಫ್ರಿಕಾ ಪಾಲುದಾರಿಕೆಯನ್ನು ಬಲಪಡಿಸಲಿದೆ ಎಂದು ಪ್ರಧಾನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.* ‘ಅಂಗೋಲಾದ ರಕ್ಷಣಾ ಪಡೆಗಳ ಆಧುನೀಕರಣವನ್ನು ಬೆಂಬಲಿಸಲು 20 ಕೋಟಿ ಡಾಲರ್ ರಕ್ಷಣಾ ಸಾಲವನ್ನು ಘೋಷಿಸಲು ನನಗೆ ಸಂತಸವಾಗಿದೆ’ ಎಂದು ಹೇಳಿದರು.* ರಕ್ಷಣಾ ಪರಿಕರಗಳ ದುರಸ್ತಿ, ಕೂಲಂಕಷ ಪರೀಕ್ಷೆ ಮತ್ತು ಪೂರೈಕೆ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು.* ‘ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಕೌಶಲಾಭಿವೃದ್ಧಿ ಕ್ಷೇತ್ರಗಳಲ್ಲಿ ಭಾರತವು ತನ್ನ ಸಾಮರ್ಥ್ಯವನ್ನು ಅಂಗೋಲಾದೊಂದಿಗೆ ಹಂಚಿಕೊಳ್ಳಲಿದೆ.* ಆರೋಗ್ಯ ರಕ್ಷಣೆ, ವಜ್ರ ಸಂಸ್ಕರಣೆ, ರಸಗೊಬ್ಬರ ಮತ್ತು ಖನಿಜ ಕ್ಷೇತ್ರಗಳಲ್ಲಿ ನಮ್ಮ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಿದ್ದೇವೆ’ ಎಂದರು.* ‘ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವವರ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳಲು ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದರು. ಭಾರತ ಮತ್ತು ಆಫ್ರಿಕನ್ ಒಕ್ಕೂಟದ ನಡುವಿನ ಸಂಬಂಧದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ, ‘ನಾವು ಪ್ರಗತಿಯಲ್ಲಿ ಪಾಲುದಾರರು’ ಎಂದರು.