* ಆಂಧ್ರಪ್ರದೇಶ ಸರ್ಕಾರವು ಹೂಡಿಕೆದಾರರನ್ನು ಆಕರ್ಷಿಸಲು ಹಾಗೂ ವ್ಯಾಪಾರ ಮಾಡುವಿಕೆಯನ್ನು ಸುಲಭಗೊಳಿಸಲು, ರಾಜ್ಯದಲ್ಲಿ ಗರಿಷ್ಠ ಕೆಲಸದ ಅವಧಿಯನ್ನು ಈಗಿನ 9 ಗಂಟೆಯಿಂದ 10 ಗಂಟೆಗೆ ವಿಸ್ತರಿಸಿದೆ.* ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಕೆ. ಪಾರ್ಥಸಾರಥಿ ಅವರು ಈ ಬಗ್ಗೆ ಮಾಹಿತಿ ನೀಡಿ, “ಹೂಡಿಕೆದಾರರು ಹಾಗೂ ಕಾರ್ಮಿಕರಿಗೆ ಅನುಕೂಲವಾಗುವಂತೆ ಕಾರ್ಮಿಕ ಕಾನೂನುಗಳಲ್ಲಿ ತಿದ್ದುಪಡಿ ಮಾಡಲಾಗುತ್ತಿದೆ.* ಸೆಕ್ಷನ್ 55ರ ಅಡಿಯಲ್ಲಿ ನೀಡಲಾಗುತ್ತಿದ್ದ 5 ಗಂಟೆಯ ನಂತರ 1 ಗಂಟೆ ವಿಶ್ರಾಂತಿ ಬದಲು, ಈಗ 6 ಗಂಟೆ ಕೆಲಸದ ಬಳಿಕ ವಿಶ್ರಾಂತಿ ನೀಡಲಾಗುವುದು” ಎಂದು ಹೇಳಿದರು.* ಹೆಚ್ಚುವರಿ ಕೆಲಸದ ಸಮಯ (ಒವರ್ಟೈಮ್) ಮಿತಿಯು 75 ಗಂಟೆಯಿಂದ 144 ಗಂಟೆಗೆ ಹೆಚ್ಚಿಸಲಾಗಿದೆ ಮತ್ತು ಮಹಿಳೆಯರು ಈಗ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ಹೊಂದಿದ್ದಾರೆ.* ಈ ತಿದ್ದುಪಡಿ ಉದ್ಯೋಗ ಮತ್ತು ಕೈಗಾರಿಕಾ ಹೂಡಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮಾಡಲಾಗಿದೆ. ಇದರಿಂದ ಕಾರ್ಮಿಕರಿಗೆ ಹೆಚ್ಚಿನ ಆದಾಯ ಲಭಿಸಲಿದೆ ಮತ್ತು ಮಹಿಳೆಯರು ಆರ್ಥಿಕವಾಗಿ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಬಲಿಷ್ಠರಾಗಲು ಸಹಕಾರಿಯಾಗಲಿದೆ ಎಂದು ಅವರು ವಿವರಿಸಿದರು.* ಆದರೆ ಈ ತಿದ್ದುಪಡಿಗೆ ಸಿಪಿಐ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯ ಕಾರ್ಯದರ್ಶಿ ಕೆ. ರಾಮಕೃಷ್ಣ ಅವರು “ಇದು ಕಾರ್ಮಿಕ ವಿರೋಧಿ ನೀತಿ” ಎಂದು ಟೀಕಿಸಿದರು. ಕೇಂದ್ರ ಮತ್ತು ರಾಜ್ಯದ ಎನ್ಡಿಎ ಸರ್ಕಾರಗಳು ಕಾರ್ಮಿಕರ ಇಚ್ಛೆಗೂ ವಿರುದ್ಧವಾಗಿ ಕ್ರಮಗಳನ್ನು ಕೈಗೊಂಡಿರುವುದಾಗಿ ಆರೋಪಿಸಿ, ಜೂನ್ 9ರಂದು ಪ್ರತಿಭಟನೆ ನಡೆಸಲಿರುವುದಾಗಿ ಕಾರ್ಮಿಕ ಸಂಘಗಳು ಘೋಷಿಸಿವೆ.