* ಶ್ವಾಸಕೋಶ ಕ್ಯಾನ್ಸರ್ಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿಶ್ವಾದ್ಯಂತ ಜನರಿಗೆ ಜಾಗೃತಿ ಮೂಡಿಸಲು ಮತ್ತು ಶ್ವಾಸಕೋಶದ ಕ್ಯಾನ್ಸರ್ ಸಂಶೋಧನೆಯ ಮೇಲೆ ಹೆಚ್ಚು ಗಮನಹರಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 1ರಂದು ಶ್ವಾಸಕೋಶ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ.* 2025ರ ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನದ ಥೀಮ್ :"ಬ್ರೇಕಿಂಗ್ ಅಡೆರೆಶನ್ಸ್: ಚಾಂಪಿಯನ್ನಿಂಗ್ ಅರ್ಲಿ ಡಿಟೆಕ್ಷನ್ ಅಂಡ್ ಈಕ್ವಲ್ ಕೇರ್"* 'ಫೋರಮ್ ಆಫ್ ಇಂಟರ್ ನ್ಯಾಷನಲ್ ರೆಸ್ಪಿಟರೇಟರಿ ಸೊಸೈಟೀಸ್' ಮತ್ತು 'ಇಂಟರ್ನ್ಯಾಷನಲ್ ಅಸೋಸಿಯೇಷನ್ ಫಾರ್ ದಿ ಸ್ಟಡಿ ಆಫ್ ಲಂಗ್ ಕ್ಯಾನ್ಸರ್' ಮೊದಲ ಬಾರಿಗೆ 2012ರಲ್ಲಿ ಈ ಅಭಿಯಾನವನ್ನು ಆರಂಭಿಸಿತು.* ವೈದ್ಯಕೀಯವಾಗಿ ಶ್ವಾಸಕೋಶ ಕ್ಯಾನ್ಸರ್ಗೆ ಧೂಮಪಾನವೇ ಮುಖ್ಯ ಕಾರಣವಾಗಿದೆ. ಆದರೆ ಧೂಮಪಾನ ಸಹವಾಸ ಮಾಡದವರಿಗೂ ಈ ಕ್ಯಾನ್ಸರ್ ಬರಬಹುದು. ವಾಯುಮಾಲಿನ್ಯ, ವಂಶವಾಹಿಯಿಂದಲೂ ಶ್ವಾಸಕೋಶ ಕ್ಯಾನ್ಸರ್ ಬರಬಹುದು ಎನ್ನುತ್ತಾರೆ ವೈದ್ಯರು.* ಪ್ರತಿ ವರ್ಷ 1.6 ಮಿಲಿಯನ್ ಜನರು ಶ್ವಾಸಕೋಶದ ಕ್ಯಾನ್ಸರ್ನಿಂದ ಸಾವಿಗೀಡಾಗುತ್ತಿದ್ದಾರೆ. ಅದರಲ್ಲಿ ಶೇ.15ರಷ್ಟು ಶ್ವಾಸಕೋಶದ ಕ್ಯಾನ್ಸರ್ ರೋಗಿಗಳಿಗೆ ಯಾವುದೇ ತಂಬಾಕು ಬಳಕೆಯ ಇತಿಹಾಸವಿಲ್ಲ ಎಂದು ಸಂಶೋಧನೆ ಹೇಳುತ್ತದೆ.* ಪಾಶ್ಚಾತ್ಯ ರಾಷ್ಟ್ರಗಳಿಗಿಂತ ಭಾರತೀಯರೇ ಹೆಚ್ಚಾಗಿ ಶ್ವಾಸಕೋಶದ ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾರೆ ಎಂದು ಮೆಡಿಕಲ್ ಜರ್ನಲ್ 'ದಿ ಲಾನ್ಸೆಟ್' ವರದಿ ಬಹಿರಂಗಪಡಿಸಿದೆ. ವಿವಿಧ ಕ್ಯಾನ್ಸರ್ ಗಳ ಪೈಕಿ ಶ್ವಾಸಕೋಶ ಕ್ಯಾನ್ಸರ್ 3ನೇ ಸ್ಥಾನದಲ್ಲಿದೆ.* ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ 10 ವರ್ಷಗಳ ಮುಂಚಿತವಾಗಿ ಜನರು ಶ್ವಾಸಕೋಶ ಕ್ಯಾನ್ಸರ್ಗೆ ಬಲಿಯಾಗುತ್ತಿದ್ದಾರೆ. ಸಾಮಾನ್ಯವಾಗಿ 54 ರಿಂದ 70 ವಯಸ್ಸಿನ ಜನರು ಈ ರೋಗದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ವರದಿ ತಿಳಿಸಿದೆ.* ಮೆಟ್ರೊ ನಗರಗಳಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವ ಕಾರಣ ಶ್ವಾಸಕೋಶ ಕ್ಯಾನ್ಸರ್ ಬಾಧಿಸುತ್ತಿದೆ ಎನ್ನುತ್ತಾರೆ ತಜ್ಞರು. ದೇಶದಲ್ಲಿ ಶ್ವಾಸಕೋಶ ಕ್ಯಾನ್ಸರ್ನಿಂದ ಬಳಲುವವರ ಸಂಖ್ಯೆ 2025ರ ವೇಳೆಗೆ 7 ಪಟ್ಟು ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ವರದಿ ಎಚ್ಚರಿಸಿದೆ.* ಅಧ್ಯಯನ ವರದಿ ಪ್ರಕಾರ 2012ರಿಂದ 2016ರ ನಡುವೆ 22,645 ಶ್ವಾಸಕೋಶದ ಕ್ಯಾನ್ಸರ್ ರೋಗಿಗಳು ಪತ್ತೆಯಾಗಿದ್ದಾರೆ. ಈ ಸಂಖ್ಯೆಯು 2025ರ ವೇಳೆಗೆ 1.61 ಲಕ್ಷಕ್ಕೆ ಏರಿಕೆಯಾಗಲಿದೆ.* ಕರ್ನಾಟಕದಲ್ಲೂ ಶ್ವಾಸಕೋಶದ ಕ್ಯಾನ್ಸರ್ ದೊಡ್ಡ ಪ್ರಮಾಣದಲ್ಲಿ ವ್ಯಾಪಿಸುತ್ತಿದೆ. ರಾಜ್ಯದಲ್ಲಿ 2023ರಲ್ಲಿ 88,873 ಕ್ಯಾನ್ಸರ್ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳಲ್ಲಿ 5,272 ಪ್ರಕರಣಗಳು ಶ್ವಾಸಕೋಶ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಶೇ.12.05ರಷ್ಟು ಪುರುಷರು ಮತ್ತು ಶೇ.8.9 ರಷ್ಟು ಮಂದಿ ಮಹಿಳೆಯರು ಶ್ವಾಸಕೋಶದ ಕ್ಯಾನ್ಸರ್ನಿಂದ ಮೃತಪಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.