* ಸರ್ಕಾರಿ ಸ್ವಾಮ್ಯದ ಇಂಡಿಯನ್ ಓವರ್ಸೀಸ್ ಬ್ಯಾಂಕ್ನಿಂದ (ಐಒಬಿ) ಗ್ರಾಹಕರಿಗೆ ಆಧಾರ್ ಒಟಿಪಿ ಮೂಲಕ ಉಳಿತಾಯ ಖಾತೆ ತೆರೆಯುವ ಸೌಲಭ್ಯ ಒದಗಿಸಲಾಗಿದೆ.* ಕಾರ್ಪೊರೇಟ್ ವಲಯದ ಗ್ರಾಹಕರ ಸುಲಭತೆಯಿಗಾಗಿ ಎಪಿಐ (ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್ಫೇಸ್) ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಬ್ಯಾಂಕ್ ತನ್ನ 89ನೇ ಸಂಸ್ಥಾಪನಾ ದಿನದ ಹಬ್ಬವನ್ನು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಜಯ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ.* ಗ್ರಾಹಕರು ಬ್ಯಾಂಕ್ನ ಜಾಲತಾಣಕ್ಕೆ ಭೇಟಿ ನೀಡಿ ಆಧಾರ್ ಸಂಖ್ಯೆ ನಮೂದಿಸಬೇಕು. ಬಳಿಕ ಆಧಾರ್ ಕಾರ್ಡ್ನಲ್ಲಿ ನೋಂದಾಯಿಸಿದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಇದನ್ನು ಬಳಸಿ ಖಾತೆ ಆರಂಭಿಸಬಹುದಾಗಿದೆ ಎಂದು ತಿಳಿಸಿದ್ದಾರೆ.* ಭಾರತೀಯ ರಿಸರ್ವ್ ಬ್ಯಾಂಕ್ನ ಆಧಾರ್ ಒಟಿಪಿ ಆಧರಿತ ಇ–ಕೆವೈಸಿ ಮಾರ್ಗದರ್ಶನಗಳ ಪ್ರಕಾರ ಈ ಸೌಲಭ್ಯ ನೀಡಲಾಗಿದೆ. ಯಾವುದೇ ಅಡಚಣೆ ಇಲ್ಲದೆ ಗ್ರಾಹಕರು ಖಾತೆ ತೆರೆಯಬಹುದಾಗಿದೆ. ಇದಕ್ಕಾಗಿ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.* ಸಕಾಲದಲ್ಲಿ ಕಾರ್ಪೊರೇಟ್ ವಲಯದ ಗ್ರಾಹಕರು ನೇರವಾಗಿ ತಮ್ಮ ಖಾತೆಗಳಿಂದ ಇತರೆ ಬ್ಯಾಂಕ್ ಖಾತೆಗಳಿಗೆ ಸುಲಭವಾಗಿ ಹಣ ವರ್ಗಾಯಿಸಲು ಎಪಿಐ ಸೌಲಭ್ಯ ನೀಡಲಾಗಿದೆ ಎಂದು ತಿಳಿಸಿದ್ದಾರೆ.