* ಮೈಸೂರು ದಸರಾ ಉತ್ಸವದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಸಾಕಾನೆ 'ಅರ್ಜುನ', ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿಯ ದಬ್ಬಳಿಕಟ್ಟೆ ಅರಣ್ಯದಲ್ಲಿ ಡಿಸೆಂಬರ್ 04 ರಂದು ನಡೆದ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ, ಒಂಟಿ ಸಲಗದ ದಾಳಿಗೆ ಸಿಲುಕಿ ಸ್ಥಳದಲ್ಲಿಯೇ ಕೊನೆಯುಸಿರೆಳೆಯಿತು.* ಡಿಸೆಂಬರ್ 04 ರಂದು 'ವಿಕ್ರಾಂತ್' ಎಂಬ ಕಾಡಾನೆ ಸೆರೆಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕ‌ರ್ ಅವರ ನೇತೃತ್ವದಲ್ಲಿ 'ಅರ್ಜುನ' ಸೇರಿ ಆರು ಸಾಕಾನೆಗಳನ್ನು ಮತ್ತೂರು ಗ್ರಾಮಕ್ಕೆ ಕರೆತಂದು ಕಾರ್ಯಾಚರಣೆ ಆರಂಭಿಸಲಾಗಿತ್ತು.* ಜಂಬೂಸವಾರಿಯಲ್ಲಿ ನಿಶಾನೆ ಆನೆಯಾಗಿ ಅರ್ಜುನ ಭಾಗಿಯಾಗಿದ್ದ. ಅರ್ಜುನ ಆನೆಗೆ 65 ವರ್ಷ ವಯಸ್ಸಾಗಿತ್ತು. 288ಮೀ ಎತ್ತರ, 5800 ರಿಂದ 6000 ಕೆ.ಜಿ. ತೂಕ ಇರುವುದು ಇತ್ತೀಚೆಗೆ ದಸರಾದಲ್ಲಿ ಭಾಗವಹಿಸಿದ್ದ ಸಂದರ್ಭ ಗೊತ್ತಾಗಿತ್ತು.* ಕಾರ್ಯಾಚರಣೆ ವೇಳೆ ದಬ್ಬಳಿ ಗ್ರಾಮ ಸಮೀಪದ ನೀರಕೊಲ್ಲಿ ಮಿನಿಡ್ಯಾಂ ನೀಲಗಿರಿ ತೋಪಿನಲ್ಲಿದ್ದ ಮೂರು ಗಂಡು, ಮೂರು ಹೆಣ್ಣು ಹಾಗೂ ಎರಡು ಮರಿಗಳಿರುವ ಕಾಡಾನೆ ಗುಂಪನ್ನು ಪತ್ತೆ ಹಚ್ಚಿದ ಸಿಬ್ಬಂದಿ, ಕಾರ್ಯಾಚರಣೆ ಆರಂಭಿಸಿದರು.* ಗುಂಪಿನಿಂದ 'ವಿಕ್ರಾಂತ' ಆನೆಯನ್ನು ಬೇರ್ಪಡಿಸಿ ಅರಿವಳಿಕೆ ಚುಚ್ಚುಮದ್ದು ನೀಡಲು ಮುಂದಾಗುತ್ತಿದ್ದಾಗಲೇ ಅದು ದಾಳಿ ಮಾಡಿತು. ಸಾಕಾನೆಗಳ ಜೊತೆಗೆ ಅದನ್ನು ಹಿಮ್ಮೆಟ್ಟಿಸಲು ಮಾವುತರು ಪ್ರಯತ್ನಿಸಿದರೂ ದಾಳಿ ತೀವ್ರವಾಗುತ್ತಿದ್ದಂತೆಯೇ ಐದು ಸಾಕಾನೆಗಳೂ ಧೈರ್ಯ ಸಾಲದೆ ಹಿಮ್ಮೆಟ್ಟಿದವು.* 'ಅರ್ಜುನ' ಮಾತ್ರ ಎದೆಗುಂದದೆ ಒಂಟಿಯಾಗಿಯೇ ಸೆಣಸಾಡುತ್ತಿತ್ತು. ಆ ಸೆಣೆಸಾಟದಲ್ಲಿ 'ಅರ್ಜುನ'ನ ಮಾವುತ ವಿನು ಅಯತಪ್ಪಿ ಕೆಳಕ್ಕೆ ಬಿದ್ದರು. ಅದೇ ಕ್ಷಣದಲ್ಲಿ, ಬಲಿಷ್ಠವಾಗಿದ್ದ 'ವಿಕ್ರಾಂತ್' ತನ್ನ ಚೂಪಾದ ಕೋರೆಯಿಂದ 'ಅರ್ಜುನ'ನ ಎಡಬದಿಯ ಕಿಬ್ಬೊಟ್ಟೆ ಭಾಗಕ್ಕೆ ತಿವಿಯಿತು. ತೀವ್ರವಾಗಿ ಗಾಯಗೊಂಡ 'ಅರ್ಜುನ' ಸ್ಥಳದಲ್ಲಿಯೇ ಮೃತಪಟ್ಟಿತು.