➤ 1948ರ ಜನವರಿ 30ರಂದು ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ನಾಥೂರಾಮ್ ಗೋಡ್ಸೆಯಿಂದ ಹತ್ಯೆಗೀಡಾದರು. ಅಹಿಂಸೆ ಮತ್ತು ಸತ್ಯದ ಹಾದಿಯಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಈ ಮಹಾನ್ ಚೇತನದ ಬಲಿದಾನವನ್ನು ಗೌರವಿಸಲು ಮತ್ತು ಅವರ ಸ್ಮರಣೆಗಾಗಿ ಪ್ರತಿವರ್ಷ ಜನವರಿ 30 ಅನ್ನು ದೇಶಾದ್ಯಂತ 'ಹುತಾತ್ಮರ ದಿನ' (Martyrs' Day) ಎಂದು ಆಚರಿಸಲಾಗುತ್ತದೆ. ಈ ವರ್ಷ್ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 78ನೇ ಪುಣ್ಯತಿಥಿಯನ್ನು (ಹುತಾತ್ಮರ ದಿನ) ದೇಶಾದ್ಯಂತ ಅತ್ಯಂತ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ದೆಹಲಿಯ ಯಮುನಾ ನದಿತೀರದಲ್ಲಿರುವ ಗಾಂಧೀಜಿಯವರ ಸಮಾಧಿ ಸ್ಥಳವಾದ 'ರಾಜ್‌ಘಾಟ್'ನಲ್ಲಿ ರಾಷ್ಟ್ರಪತಿಗಳು ಮತ್ತು ಪ್ರಧಾನಿಯವರು ಪುಷ್ಪನಮನ ಸಲ್ಲಿಸಿದರು. ➤ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ರಾಜ್‌ಘಾಟ್‌ಗೆ ಭೇಟಿ ನೀಡಿ ಬಾಪೂಜಿಯವರ ಸ್ಮರಣಾರ್ಥ ಶ್ರದ್ಧಾಂಜಲಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸರ್ವಧರ್ಮ ಪ್ರಾರ್ಥನಾ ಸಭೆಯನ್ನು ಆಯೋಜಿಸಲಾಗಿತ್ತು.➤ ಸಾಮಾಜಿಕ ಜಾಲತಾಣ 'X' ನಲ್ಲಿ ಸಂದೇಶ ಹಂಚಿಕೊಂಡ ಪ್ರಧಾನಿ ಮೋದಿ ಅವರು:ಗಾಂಧೀಜಿಯವರ ಆದರ್ಶಗಳು ಮತ್ತು ಅವರು 'ಸ್ವದೇಶಿ' ವಸ್ತುಗಳಿಗೆ ನೀಡಿದ ಪ್ರಾಮುಖ್ಯತೆಯೇ ಇಂದು ಭಾರತವನ್ನು 'ಸ್ವಾವಲಂಬಿ' (ಆತ್ಮನಿರ್ಭರ) ರಾಷ್ಟ್ರವಾಗುವತ್ತ ಮುನ್ನಡೆಸುತ್ತಿದೆ. ಮತ್ತು  ಬಾಪೂಜಿಯವರ ವ್ಯಕ್ತಿತ್ವ ಮತ್ತು ಸಾಧನೆಗಳು ಪ್ರತಿಯೊಬ್ಬ ಭಾರತೀಯನನ್ನು 'ಕರ್ತವ್ಯ'ದ ಹಾದಿಯಲ್ಲಿ ನಡೆಯಲು ಪ್ರೇರೇಪಿಸುತ್ತವೆ ಎಂದು ತಿಳಿಸಿದರು.➤ ಕೇಂದ್ರ ಸಚಿವ ಅಮಿತ್ ಶಾ ಅಭಿಮತ: ಭಾಷೆ, ಪ್ರಾಂತ್ಯ ಮತ್ತು ಜಾತಿಗಳಿಂದ ವಿಭಜನೆಗೊಂಡಿದ್ದ ಭಾರತವನ್ನು ಒಗ್ಗೂಡಿಸಿ ಸ್ವಾತಂತ್ರ್ಯ ಚಳವಳಿಗೆ ಅಪ್ರತಿಮ ಬಲ ನೀಡಿದವರು ಗಾಂಧೀಜಿ. ಅವರ ಸ್ವಚ್ಛತೆ ಮತ್ತು ಸ್ವಾವಲಂಬನೆಯ ಕನಸು ನವ ಭಾರತಕ್ಕೆ ದಾರಿದೀಪವಾಗಿದೆ ಎಂದು ಅಮಿತ್ ಶಾ ಬಣ್ಣಿಸಿದರು.