* ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ 38ನೇ ರಾಷ್ಟ್ರೀಯ ಕ್ರೀಡೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಜ.28) ಚಾಲನೆ ನೀಡಿದರು. ಈ ವೇಳೆ 2036ರ ಒಲಿಂಪಿಕ್ ಆತಿಥ್ಯ ವಹಿಸುವುದಕ್ಕೆ ಭಾರತದ ಬದ್ಧತೆಯನ್ನು ಮೋದಿ ಪುನರುಚ್ಚರಿಸಿದರು.* ಈ ವರ್ಷದ 38 ನೇ ರಾಷ್ಟ್ರೀಯ ಕ್ರೀಡಾಕೂಟದ ಥೀಮ್ “ಗ್ರೀನ್ ಗೇಮ್ಸ್” ಆಗಿದೆ. * ಡೆಹ್ರಾಡೂನ್ ಕೇಂದ್ರವಾಗಿಟ್ಟುಕೊಂಡು ಉತ್ತರಾಖಂಡದ ಎಂಟು ಜಿಲ್ಲೆಗಳ 11 ನಗರಗಳಲ್ಲಿ ಜನವರಿ 28 ರಿಂದ ಫೆಬ್ರವರಿ 14 ರವರೆಗೆ ಈ ಕ್ರೀಡಾಕೂಟ ನಡೆಯಲಿದೆ.* ಉದ್ಘಾಟನಾ ಸಮಾರಂಭದಲ್ಲಿ ಉತ್ತರಾಖಂಡದ ಧಾರ್ಮಿಕ ಪರಂಪರೆ, ಜೀವವೈವಿಧ್ಯ ಸಾರುವ ಕಾರ್ಯಕ್ರಮಗಳನ್ನು ಮತ್ತು ಪಥಸಂಚಲನದ ನಂತರ ಕ್ರೀಡಾ ಜ್ಯೋತಿ ಸ್ವೀಕರಿಸಿದ ಮೋದಿ, ನಂತರ ಕ್ರೀಡಾಕೂಟದ ಅಧಿಕೃತ ಆರಂಭವನ್ನು ಸಾರಿದರು.* 10,000 ಕ್ರೀಡಾಪಟುಗಳು 32 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಡೆಹ್ರಾಡೂನ್ ಕೇಂದ್ರವಾಗಿಟ್ಟುಕೊಂಡು ರಾಜ್ಯದ ವಿವಿಧ ನಗರಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ.* ಫೆಬ್ರುವರಿ 14ರವರೆಗೆ ನಡೆಯುವ ಈ ಕ್ರೀಡೆಗಳಲ್ಲಿ 450 ಚಿನ್ನದ ಪದಕ, ಬೆಳ್ಳಿ ಪದಕ ಮತ್ತು ಕಂಚಿನ ಪದಕಗಳಿಗೆ ಪೈಪೋಟಿ ನಡೆಯಲಿದೆ. * ಯಾವೆಲ್ಲಾ ಕ್ರೀಡೆಗಳು ಇರಲಿವೆ : ಅಥ್ಲೆಟಿಕ್ಸ್, ಈಜು, ಶೂಟಿಂಗ್,ಬ್ಯಾಡ್ಮಿಂಟನ್, ಕುಸ್ತಿ, ಹಾಕಿ, ಬಾಕ್ಸಿಂಗ್, ವೇಟ್ ಲಿಫ್ಟಿಂಗ್, ಫುಟ್ಬಾಲ್, ಟೆನಿಸ್, ಟೇಬಲ್ ಟೆನಿಸ್ ನಂತಹ ಕ್ರೀಡೆಗಳ ಜತೆಗೆ ಯೋಗಾಸನ , ಮಲ್ಲಕಂಬ, ಕಲರಿಪಯಟ್ಟು, ರಾಫ್ಟಿಂಗ್ ಪ್ರದರ್ಶನ ಕ್ರೀಡೆಗಳಿವೆ. ʼಖೋಖೋʼ, ಕಬಡ್ಡಿ ಅಂತಹ ಸಾಂಪ್ರದಾಯಿಕ ಕ್ರೀಡೆಗಳೂ ಈ ಬಾರಿಯ ಕ್ರೀಡಾಕೂಟದಲ್ಲಿ ಇರಲಿದೆ.* ಈ ಬಾರಿಯ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮನುಭಾಕರ್, ಇಶಾ ಸಿಂಗ್, ನೀರಜ್ ಚೋಪ್ರಾ ಪಾಲ್ಗೊಳ್ಳುತ್ತಿಲ್ಲ. ಸ್ವಪ್ನಿಲ್ ಕುಸಾಲೆ, ಲವ್ಲಿನಾ ಬೊರ್ಗೊಹೈನ್ ಮುಂತಾದವರು ಕಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ.* ಕರ್ನಾಟಕದ ಹಲವು ಕ್ರೀಡಾಪಟುಗಳು ಪಾಲ್ಗೊಳಲಿದ್ದು ಪದಕ ಗೆಲ್ಲುವ ನಿರೀಕ್ಷೆಯಿದೆ. 2023ರಲ್ಲಿ ಗೋವಾದಲ್ಲಿ ನಡೆದಿದ್ದ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ 32 ಚಿನ್ನ ಸೇರಿ 101 ಪದಕಗಳನ್ನು ಗೆದ್ದುಕೊಂಡಿತ್ತು.* ಉತ್ತರಾಖಂಡದ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಕ್ರೀಡಾಜ್ಯೋತಿಯನ್ನು ವೇದಿಕೆಗೆ ತಂದು ಮೋದಿ ಅವರಿಗೆ ಹಸ್ತಾಂತರಿಸಿದರು. ಸೇನ್ ಕ್ರೀಡಾಪಟುಗಳಿಗೆ ಪ್ರಮಾಣ ಬೋಧಿಸಿದರು.