* 'ಎವರೆಸ್ಟ್ ಮ್ಯಾನ್' ಎಂದೇ ಹೆಸರಾಗಿರುವ ನೇಪಾಳದ 54 ವರ್ಷದ ಪರ್ವತಾರೋಹಿ ಕಾಮಿ ರಿಟಾ ಶೆರ್ಪಾ ಅವರು ವಿಶ್ವದ ಅತಿ ಎತ್ತರದ ಶಿಖರ 'ಮೌಂಟ್‌ ಎವರೆಸ್ಟ್‌' ಅನ್ನು 29ನೇ ಬಾರಿಗೆ ಏರುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಸ್ಥಳೀಯ ಕಾಲಮಾನ ಪ್ರಕಾರ ಮೇ 12 ರಂದು ಬೆಳಗ್ಗೆ 7.25ಕ್ಕೆ ಕಾಮಿ ರೀಟಾ ಅವರು 8,849 ಮೀ. ಎತ್ತರವನ್ನು ಮುಟ್ಟಿದ್ದಾರೆ.* ರೀಟಾ ಅವರು ಮೇ 12 ರಂದು (ಭಾನುವಾರ) ಬೆಳಿಗ್ಗೆ ಪರ್ವತದ ತುತ್ತತುದಿ 8,848.86 ಮೀಟರ್‌ ಎತ್ತರಕ್ಕೆ ತಲುಪಿದರು ಎಂದು ನೇಪಾಳ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.*  71 ವರ್ಷಗಳ ಸಾಗರಮಾತಾ ಚಾರಣ ಇತಿಹಾಸದಲ್ಲಿ, ಜಗತ್ತನ ಅತ್ಯಂತ ಎತ್ತರದ ಪರ್ವತವನ್ನು ಅತಿ ಹೆಚ್ಚು ಬಾರಿ ಹತ್ತಿದ ದಾಖಲೆ ಕಾಮಿ ರಿಟಾ ಪಾಲಾಗಿದೆ. * 1994ರಲ್ಲಿ ಮೊದಲ ಬಾರಿಗೆ ಮೌಂಟ್‌ ಎವರೆಸ್ಟ್‌ ಅನ್ನು ಕಾಮಿ ಚಾರಣ ಮಾಡಿದ್ದರು. ಕಳೆದ ವರ್ಷ ಎರಡು ಬಾರಿಗೆ ಚಾರಣಕ್ಕೆ ಯತ್ನಿಸಿ ಯಶಸ್ವಿಯಾಗಿದ್ದರು. ಸೆವೆನ್‌ ಸಮಿಟ್‌ ಟ್ರೆಕ್ಸ್‌ನಲ್ಲಿ ಕಾಮಿ ಅವರು ಪರ್ವತಾರೋಹಿಗಳಿಗೆ ಮಾರ್ಗದರ್ಶಕರಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 1970ರ ಜನವರಿ 17ರಲ್ಲಿ ಜನಿಸಿದ ಕಾಮಿ ರಿಟಾ ಅವರು 1992ರಿಂದ ಪರ್ವತಾರೋಹಣ ಸಾಹಸದಲ್ಲಿ ತೊಡಗಿಸಿಕೊಂಡಿದ್ದಾರೆ. ಎವರೆಸ್ಟ್‌ ಅಲ್ಲದೆಯೇ ಮೌಂಟ್‌ ಕೆ2, ಛೋ ಒಯು, ಲ್ಹೊತ್ಸೆ ಹಾಗೂ ಮನಾಸ್ಲು ಶಿಖರಗಳನ್ನು ಕೂಡ ಅವರು ಏರಿದ್ದಾರೆ.