* ಭಾರತದ ಮುಂದಿನ ಜನಗಣತಿಗೆ ಮುನ್ನ, ಮನೆಗಳ ಪಟ್ಟಿ ಮಾಡುವ ಕಾರ್ಯಾಚರಣೆ (ಹೌಸ್ ಲಿಸ್ಟಿಂಗ್ ಆಪರೇಷನ್- HLO) 2026ರ ಏಪ್ರಿಲ್ 1ರಂದು ಆರಂಭವಾಗಲಿದೆ. ಇದು ಜನಗಣತಿಯ ಮೊದಲ ಹಂತವಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ಮೃತ್ಯುಂಜಯ್ ಕುಮಾರ್ ನಾರಾಯಣ್ ಹೇಳಿದ್ದಾರೆ.* ಪ್ರಥಮ ಹಂತಕ್ಕೆ ಮುನ್ನ ರಾಜ್ಯ ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ ಗಣತಿದಾರರು ಮತ್ತು ಮೇಲ್ವಿಚಾರಕರ ನೇಮಕಾತಿ, ಕೆಲಸದ ಹಂಚಿಕೆ ನಡೆಯಲಿದೆ. ಈ ಹಂತದಲ್ಲಿ ದೇಶದ ಎಲ್ಲ ಮನೆಗಳ ಗುಣಲಕ್ಷಣ ಮತ್ತು ಸ್ವತ್ತುಗಳ ಮಾಹಿತಿ ಸಂಗ್ರಹಿಸಲಾಗುತ್ತದೆ.* ಮತ್ತೆ ಜನಗಣತಿಯ ಎರಡನೇ ಹಂತದಲ್ಲಿ, ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಮಾಹಿತಿ ಕಲೆಹಾಕಲಾಗುತ್ತದೆ. ಈ ಬಾರಿ ಜಾತಿ ಗಣತಿಯನ್ನೂ ಸೇರಿಸಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ.* ಇದು ಭಾರತದ ಮೊದಲ ಡಿಜಿಟಲ್ ಜನಗಣತಿ ಆಗಲಿದೆ. ನಾಗರಿಕರಿಗೆ ಸ್ವಯಂ-ಗಣತಿಗೆ ಅವಕಾಶ ಕಲ್ಪಿಸಲಾಗಿದೆ. ಒಟ್ಟು 34 ಲಕ್ಷ ಗಣತಿದಾರರು ಮತ್ತು ಮೇಲ್ವಿಚಾರಕರು ಹಾಗೂ 1.3 ಲಕ್ಷ ಅಧಿಕಾರಿಗಳನ್ನು ನಿಯೋಜಿಸಲಾಗುವುದು.* 2025ರ ಡಿಸೆಂಬರ್ 31ರೊಳಗೆ ಜಿಲ್ಲೆ, ಉಪವಿಭಾಗ, ತಹಸಿಲ್, ಪೊಲೀಸ್ ಠಾಣೆ ಮುಂತಾದ ಆಡಳಿತಾತ್ಮಕ ಗಡಿಗಳನ್ನು ಅಂತಿಮಗೊಳಿಸುವಂತೆ ಸೂಚನೆ ನೀಡಲಾಗಿದೆ. ಜನಗಣತಿ ಪ್ರಕ್ರಿಯೆ ನಡೆಯುವ ಸಮಯದಲ್ಲಿ (2026 ಜ.1 ರಿಂದ 2027 ಮಾ.31) ಯಾವುದೇ ಗಡಿ ಬದಲಾವಣೆ ನಡೆಸಬಾರದು ಎಂಬುದು ನಿಬಂಧನೆಯಾಗಿದೆ.