* ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ಸ್ತಬ್ಧಚಿತ್ರಗಳ ಪ್ರದರ್ಶನಕ್ಕೆ ಕರ್ನಾಟಕವೂ ಸೇರಿ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆಯ್ಕೆಯಾಗಿವೆ. * ಆಯ್ಕೆಯಾದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಟ್ಟಿಯನ್ನು ಕೇಂದ್ರ ರಕ್ಷಣಾ ಇಲಾಖೆ ಬಿಡುಗಡೆ ಮಾಡಿದೆ.* 'ಸ್ವರ್ಣಿಮ ಭಾರತ: ವಿರಾಸತ್ ಔರ್ ವಿಕಾಸ್' (ಪರಂಪರೆ ಮತ್ತು ಅಭಿವೃದ್ಧಿ) ಧೈಯವಾಕ್ಯದಡಿ ಈ ವರ್ಷದ (ಜನವರಿ 26 2025) ಗಣರಾಜ್ಯೋತ್ಸವ ನಡೆಯಲಿದೆ. ಗಣರಾಜ್ಯೋತ್ಸವ ಆಚರಣೆಗೆ ಕೇಂದ್ರ ಸರಕಾರದ 11 ಸಚಿವಾಲಯಗಳು ಮತ್ತು ಇಲಾಖೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.* ರಕ್ಷಣಾ ಇಲಾಖೆ ಪ್ರತಿ ಮೂರು ವರ್ಷಗಳಿಗೊಮ್ಮೆ ಒಂದು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಸ್ತಬ್ಧಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡುತ್ತದೆ. ಪರೇಡ್‌ನಲ್ಲಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನೂ ಮಾತ್ರ ಸೀಮಿತ ಮಾಡಲಾಗಿದೆ. ಇದಕ್ಕಾಗಿ ಅಂತರ್ ರಾಜ್ಯ ಮಂಡಳಿಯ ಆಧಾರದ ಮೇಲೆ ದೇಶವನ್ನು ಆರು ವಲಯಗಳನ್ನಾಗಿ ವಿಭಾಗಿಸಲಾಗಿದೆ. * 2024, 2025 ಹಾಗೂ 2026ರಲ್ಲಿ ಯಾವ ಯಾವ ರಾಜ್ಯಗಳು ಸ್ತಬ್ದಚಿತ್ರ ಪ್ರದರ್ಶಿಸಬೇಕು ಎಂಬುದರ ಪಟ್ಟಿ ಈಗಾಗಲೇ ಮಾಡಲಾಗಿದೆ. ಆ ಪ್ರಕಾರ, ದಕ್ಷಿಣದ ರಾಜ್ಯಗಳ ಪೈಕಿ ಆಂಧ್ರ ಮತ್ತು ಕರ್ನಾಟಕ್ಕೆ 2025ರಲ್ಲಿ ಅವಕಾಶ ಸಿಕ್ಕಿದೆ. ಕೇರಳ, ತಮಿಳುನಾಡು, ಪುದುಚೆರಿಗೆ 2026ರಲ್ಲಿ ಅವಕಾಶ ಸಿಗಲಿದೆ.* ಕರ್ನಾಟಕ ರಾಜ್ಯದಿಂದ ಈ ಬಾರಿ ಲಕ್ಕುಂಡಿಯ ಪ್ರಾಚೀನ ದೇವಾಲಯ ಸ್ತಬ್ದಚಿತ್ರ ಪ್ರದರ್ಶಿಸಲು ನಿರ್ಧರಿಸಲಾಗಿದೆ. ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸುವ ಪ್ರಯತ್ನ ನಡೆಸುತ್ತಿರುವ ರಾಜ್ಯ ಸರಕಾರ ಲಕ್ಕುಂಡಿಯನ್ನು ಆಯ್ಕೆ ಮಾಡಿದೆ. ಚಾಲುಕ್ಯರು, ಕಲಚೂರಿಗಳ ಕಾಲದ ಹಲವು ಶೈವ, ಜೈನ ದೇವಾಲಯಗಳು ಲಕ್ಕುಂಡಿಯಲ್ಲಿವೆ.* ಲಕ್ಕುಂಡಿ ನಿವಾಸಿ ಶರಣು ಗರಜಪ್ಪನವರ್ ಮಾತನಾಡಿ, ಗಣರಾಜ್ಯೋತ್ಸವ ಪಥಸಂಚಲನಕ್ಕೆ ನಮ್ಮ ದೇವಸ್ಥಾನದ ಸ್ತಬ್ಧಚಿತ್ರ ಆಯ್ಕೆಯಾಗಿರುವುದು ಸಂತಸ ತಂದಿದೆ. ಇದು ಲಕ್ಕುಂಡಿ ಮತ್ತು ಅದರ ಶ್ರೀಮಂತ ಪರಂಪರೆಯನ್ನು ಜನಪ್ರಿಯಗೊಳಿಸಲು ಸಹಾಯ ಮಾಡುತ್ತದೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.* 11 ನೇ ಶತಮಾನದ ದೇವಾಲಯ ಬ್ರಹ್ಮ ಜಿನಾಲಯವು ಲಕ್ಕುಂಡಿಯಲ್ಲಿರುವ ವಸ್ತುಸಂಗ್ರಹಾಲಯದ ಸಮೀಪವಿರುವ ದೇವಾಲಯವಾಗಿದೆ. ಬ್ರಹ್ಮಜಿನಾಲಯ ದೇವಾಲಯ ಕ್ರಿ.ಶ 11ನೇ ಶತಮಾನದ್ದಾಗಿದ್ದು, ಪೂರ್ವಾಭಿಮುಖವಾಗಿ ಗರ್ಭಗುಡಿ, ಅಂತರಾಳ, ಗೂಢಮಂಟಪ, ಅಗ್ರಮಂಟಪ, ತಲವಿನ್ಯಾಸ ಹೊಂದಿರುವ, ಕಪ್ಪು ಶಿಲೆಯಿಂದ ರಚನೆಗೊಂಡಿದೆ. ಚೌಕಾಕಾರದ ಗರ್ಭಗೃಹದ ಮಧ್ಯದಲ್ಲಿ ಎತ್ತರವಾದ ಸಿಂಹಪೀಠದ ಮೇಲೆ ತೀರ್ಥಂಕರನ ಶಿಲ್ಪವಿದೆ.