* ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ಗಾಂಧಿವಾದಿ ಡಾ. ಗುಣವಂತರಾಯ್ ಗಣಪತ್ಲಾಲ್ ಪಾರಿಕ್ (ಜಿಜಿ ಪಾರಿಕ್) ಗುರುವಾರ(ಅಕ್ಟೋಬರ್ 02) ಮುಂಬೈಯಲ್ಲಿ 101ನೇ ವಯಸ್ಸಿನಲ್ಲಿ ನಿಧನರಾದರು.* ಮಹಾತ್ಮ ಗಾಂಧಿಯವರ 156ನೇ ಜಯಂತಿಯಂದೇ ಅವರು ಕೊನೆಯುಸಿರೆಳೆದರು.* 1942ರ ಕ್ವಿಟ್ ಇಂಡಿಯಾ ಚಳವಳಿ, ಗೋವಾ ವಿಮೋಚನಾ ಚಳವಳಿ ಮತ್ತು ಸಂಯುಕ್ತ ಮಹಾರಾಷ್ಟ್ರ ಚಳವಳಿಯಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. 1975ರ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು.* 1951-52ರಲ್ಲಿ ನಡೆದ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಹಿಡಿದು ಎಲ್ಲಾ ಚುನಾವಣೆಗಳಲ್ಲೂ ಮತ ಚಲಾಯಿಸಿದ್ದವರು ಪಾರಿಕ್. ವೈದ್ಯರಾಗಿದ್ದ ಅವರು ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಕೊಂಡಿದ್ದರು.* 1961ರಲ್ಲಿ ಸ್ಥಾಪನೆಯಾದ ಯೂಸುಫ್ ಮೆಹರಲ್ಲಿ ಕೇಂದ್ರದ ಅಧ್ಯಕ್ಷರಾಗಿ, ಆರೋಗ್ಯ, ಶಿಕ್ಷಣ, ಮಹಿಳಾ-ಆದಿವಾಸಿ ಸಬಲೀಕರಣ, ಕೃಷಿ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ವಿಪತ್ತು ಪರಿಹಾರ ಕ್ಷೇತ್ರಗಳಲ್ಲಿ ಪಾರಿಕ್ ಮಹತ್ವದ ಕೊಡುಗೆ ನೀಡಿದ್ದಾರೆ.* ಅವರ ಮೃತದೇಹವನ್ನು ಮುಂಬೈಯ ಸರ್ಕಾರಿ ಜೆಜೆ ಆಸ್ಪತ್ರೆಗೆ ದಾನ ಮಾಡಲು ಕುಟುಂಬ ನಿರ್ಧರಿಸಿದೆ.