* ಭಾರತೀಯ ರಿಸರ್ವ್ ಬ್ಯಾಂಕ್ (RBI) 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತ ಮಕ್ಕಳಿಗೆ ಬ್ಯಾಂಕ್ ಖಾತೆಗಳನ್ನು ಸ್ವತಂತ್ರವಾಗಿ ತೆರೆಯಲು ಹಾಗೂ ನಿರ್ವಹಿಸಲು ಅವಕಾಶ ನೀಡುವ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.* ಈ ಹೊಸ ಮಾರ್ಗಸೂಚಿಗಳ ಪ್ರಕಾರ, ಇನ್ನು ಮುಂದೆ ಅವರು ಉಳಿತಾಯ ಹಾಗೂ ಅವಧಿ ಠೇವಣಿ ಖಾತೆಗಳನ್ನು ತಾವೇ ನೇರವಾಗಿ ನಿರ್ವಹಿಸಬಹುದು. ಈ ನಿರ್ಧಾರ 2025ರ ಜುಲೈ 1ರಿಂದಲೇ ಜಾರಿಗೆ ಬರಲಿದೆ.* ಇದುವರೆಗೆ ಅಪ್ರಾಪ್ತರ ಖಾತೆಗಳನ್ನು ಪೋಷಕರ ಮೂಲಕವೇ ನಿರ್ವಹಿಸಲಾಗುತ್ತಿತ್ತು. ಆದರೆ ಈಗ ಆ ನಿಯಮದಲ್ಲಿ ಸಡಿಲತೆ ನೀಡಲಾಗಿದೆ. * 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಇನ್ನು ಮುಂದೆ ಬ್ಯಾಂಕ್ ಖಾತೆ ತೆರೆಯುವಾಗ ತಮ್ಮದೇ ಆದ ಮಾದರಿ ಸಹಿ ಮತ್ತು ಅಗತ್ಯವಿರುವ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.* ಇಂತಹ ಖಾತೆಗಳಿಗೆ ಇಂಟರ್ನೆಟ್ ಬ್ಯಾಂಕಿಂಗ್, ಎಟಿಎಂ, ಡೆಬಿಟ್ ಕಾರ್ಡ್ ಹಾಗೂ ಚೆಕ್ ಬುಕ್ ಸೌಲಭ್ಯಗಳನ್ನೂ ಒದಗಿಸಬಹುದು.* ಆರ್ಬಿಐ ಎಲ್ಲ ಬ್ಯಾಂಕುಗಳಿಗೆ ತಮ್ಮದೇ ಆದ ರಿಸ್ಕ್ ನಿರ್ವಹಣಾ ನೀತಿಯ ಆಧಾರದಲ್ಲಿ ಸೇವೆ ನೀಡಬೇಕೆಂದು ಸೂಚಿಸಿದೆ. ಇದರಲ್ಲಿ ಮೊತ್ತದ ಮಿತಿ ಹಾಗೂ ಇತರ ನಿರ್ಬಂಧಗಳನ್ನು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕಾಗಿದೆ.* ಅಪ್ರಾಪ್ತ ವಯಸ್ಕರು ವಯಸ್ಕರಾದ ನಂತರ, ಹೊಸ ಕಾರ್ಯಾಚರಣಾ ಮಾದರಿ ಹಾಗೂ ಸಹಿಯನ್ನು ದಾಖಲೆಗಳಲ್ಲಿ ತಿದ್ದಬೇಕೆಂಬ ಅಗತ್ಯವಿದೆ.* 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಕೂಡ ಖಾತೆ ತೆರೆಯಬಹುದು, ಆದರೆ ಅವರು ಪೋಷಕರ ಮೇಲ್ವಿಚಾರಣೆಯಲ್ಲಿಯೇ ಖಾತೆ ನಿರ್ವಹಿಸಬೇಕಾಗುತ್ತದೆ. ಜೊತೆಗೆ, ಅಪ್ರಾಪ್ತರಿಗೆ ಸೇರಿದ ಖಾತೆಗಳಲ್ಲಿ ಓವರ್ಡ್ರಾಫ್ಟ್ ಅವಕಾಶವಿಲ್ಲ. ಈ ಖಾತೆಗಳಲ್ಲಿ ಯಾವಾಗಲೂ ಕ್ರೆಡಿಟ್ ಬ್ಯಾಲೆನ್ಸ್ ಇದ್ದೇ ಇರಬೇಕೆಂದು ಆರ್ಬಿಐ ಎಲ್ಲಾ ಬ್ಯಾಂಕುಗಳಿಗೆ ಸೂಚಿಸಿದೆ.