Loading..!

Back
ಯುಜಿಸಿ-ನೆಟ್ ಪರೀಕ್ಷೆ: ಸಿದ್ಧತೆಗೆ ಇದು ಸಕಾಲ!ಯುಜಿಸಿ-ನೆಟ್ ಪರೀಕ್ಷೆ: ಸಿದ್ಧತೆಗೆ ಇದು ಸಕಾಲ!

| Published on: 11 ಸೆಪ್ಟೆಂಬರ್ 2019

Image not found

ಪ್ರಶಾಂತ ಹೆಚ್.ವೈ.

ರಾಷ್ಟ್ರೀಯ ಮಟ್ಟದ ಯುಜಿಸಿ-ನೆಟ್ ಪರೀಕ್ಷೆಗಳನ್ನು 2018ರ ಡಿಸೆಂಬರ್‌ನಿಂದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ನಡೆಸುತ್ತಿದ್ದು, ಪ್ರತಿ ವರ್ಷ ಎರಡು ಬಾರಿ ಜೂನ್ ಮತ್ತು ಡಿಸೆಂಬರ್‌ನಲ್ಲಿ ಈ ಪರೀಕ್ಷೆಗಳನ್ನು ಆಯೋಜಿಸಲಾಗುತ್ತದೆ.

ಉದ್ಯೋಗಾವಕಾಶ ಅಭ್ಯರ್ಥಿ ಯಾವ ವಿಷಯದಲ್ಲಿ ನೆಟ್ ಪರೀಕ್ಷೆ ಅರ್ಹತೆ ಗಳಿಸುತ್ತಾನೆಯೋ ಆ ವಿಷಯದಲ್ಲಿ ದೇಶದ ವಿಶ್ವವಿದ್ಯಾಲಯಗಳಲ್ಲಿ ಮತ್ತು ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆಯುತ್ತಾನೆ. ಜೊತೆಗೆ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಯುಜಿಸಿ-ನೆಟ್‌ನ ಅಂಕಗಳನ್ನು ಆಧರಿಸಿ ಕಾರ್ಯನಿರ್ವಾಹಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ವಿಜ್ಞಾನ, ಆಡಳಿತ ನಿರ್ವಹಣೆ, ಕಾರ್ಪೊರೇಟ್ ಸಂವಹನ, ಮಾನವ ಸಂಪನ್ಮೂಲ ಮತ್ತು ಹಣಕಾಸುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನೆಟ್ ಉತ್ತೀರ್ಣಗೊಂಡ ಅಭ್ಯರ್ಥಿಗಳಿಗೆ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ವಿಫುಲ ಅವಕಾಶಗಳಿವೆ. ಅಷ್ಟೇ ಅಲ್ಲದೇ ಪೂರ್ಣಾವಧಿ ಪಿಎಚ್.ಡಿ. ಸಂಶೋಧನೆ ಮಾಡಲು ಯುಜಿಸಿಯಿಂದ ಕಿರಿಯ ಸಂಶೋಧನಾ ಶಿಷ್ಯವೇತನವನ್ನೂ ಪಡೆಯಲು ಅರ್ಹತೆಯನ್ನು ಪಡೆದುಕೊಳ್ಳುತ್ತಾರೆ. ಅರ್ಜಿ ಸಲ್ಲಿಕೆಗೆ ಮಾನದಂಡ ಸಾಮಾನ್ಯ ಅಭ್ಯರ್ಥಿಯು ತನ್ನ ಸ್ನಾತಕೋತ್ತರ ಪದವಿಯಲ್ಲಿ ಶೇ 55 ಅಂಕಗಳನ್ನು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕೆನೆಪದರಕ್ಕೆ ಸೇರದ ಇತರೆ ಹಿಂದುಳಿದ ಸಮುದಾಯಗಳು, ತೃತೀಯ ಲಿಂಗಿಗಳು ಮತ್ತು ವಿಕಲಚೇತನರು ಶೇ 50 ಅಂಕಗಳನ್ನು ಪಡೆದಿರಬೇಕು. ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿರುವ ಮತ್ತು ಅಂತಿಮ ವರ್ಷದ ಪರೀಕ್ಷಾ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳೂ ಸಹ ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕೆನೆಪದರಕ್ಕೆ ಸೇರದ ಇತರೆ ಹಿಂದುಳಿದ ಸಮುದಾಯಗಳು, ತೃತೀಯ ಲಿಂಗಿಗಳು ಮತ್ತು ವಿಕಲಚೇತನರಿಗೆ ಅರ್ಹತಾ ಅಂಕ, ಶುಲ್ಕ ಪಾವತಿಯಲ್ಲಿ ವಿಶೇಷ ರಿಯಾಯಿತಿಯನ್ನು ನೀಡಲಾಗಿದೆ. ಈ ಪರೀಕ್ಷೆಯನ್ನು ಕಲಾ, ಸಮಾಜ ವಿಜ್ಞಾನ, ವಿಜ್ಞಾನ, ವಾಣಿಜ್ಯ ವಿಭಾಗಗಳನ್ನೊಳಗೊಂಡಂತೆ ಒಟ್ಟು 81 ವಿಷಯಗಳಲ್ಲಿ ನಡೆಸಲಾಗುತ್ತದೆ. ಕೇಂದ್ರಾಡಳಿತ ಪ್ರದೇಶ ಮತ್ತು ರಾಷ್ಟ್ರೀಯ ರಾಜಧಾನಿ ದೆಹಲಿಯನ್ನೊಳಗೊಂಡಂತೆ 263 ನಗರಗಳಲ್ಲಿ ಈ ಪರೀಕ್ಷೆಯು ನಡೆಯುತ್ತದೆ. ಪರೀಕ್ಷೆಯ ರೂಪುರೇಷೆ ಪರೀಕ್ಷೆಯು ಮೂರು ಗಂಟೆ ಅವಧಿಯದ್ದಾಗಿದ್ದು, ಪತ್ರಿಕೆ-1 ಮತ್ತು ಪತ್ರಿಕೆ-2 ರ ನಡುವೆ ಯಾವುದೇ ವಿರಾಮ ಇರುವುದಿಲ್ಲ. ಈ ಪರೀಕ್ಷೆಗೆ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಮಾತ್ರವೇ ಸಲ್ಲಿಸಬೇಕು. ಪ್ರಶ್ನೆಪತ್ರಿಕೆಯು ಬಹು ಆಯ್ಕೆ ಮಾದರಿಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಪತ್ರಿಕೆ-1 ರಲ್ಲಿ 50 ಪ್ರಶ್ನೆಗಳಿದ್ದು, ಪತ್ರಿಕೆ-2 ರಲ್ಲಿ 100 ಪ್ರಶ್ನೆಗಳಿದ್ದು ಪ್ರತಿಯೊಂದು ಪ್ರಶ್ನೆಗೂ ಎರಡು ಅಂಕಗಳಿರುತ್ತವೆ. ಒಟ್ಟು 300 ಅಂಕಗಳಿಗೆ ಪರೀಕ್ಷೆ ನಡೆಯುತ್ತದೆ. ಪ್ರತಿಯೊಂದು ಪ್ರಶ್ನೆಗಳೂ ಕಡ್ಡಾಯವಾಗಿದ್ದು, ತಪ್ಪು ಉತ್ತರಕ್ಕೆ ಯಾವುದೇ ನಕಾರಾತ್ಮಕ ಅಂಕಗಳಿರುವುದಿಲ್ಲ. ಎಲ್ಲವೂ ಬಹು ಆಯ್ಕೆ ಪ್ರಶ್ನೆಗಳಾಗಿರುತ್ತವೆ. ಈ ಪ್ರಶ್ನೆಗಳು ಅಭ್ಯರ್ಥಿಯ ತಾರ್ಕಿಕತೆ, ಚಿಂತನೆ, ಬೌದ್ಧಿಕ ಸಾಮರ್ಥ್ಯ, ಬೋಧನಾ ಮಟ್ಟ, ಸಂಶೋಧನೆ, ಮಾಹಿತಿ ಮತ್ತು ತಂತ್ರಜ್ಞಾನ, ಅಭಿವೃದ್ಧಿ ಮತ್ತು ಪರಿಸರ ಹಾಗೂ ಉನ್ನತ ಶಿಕ್ಷಣ ವ್ಯವಸ್ಥೆಗಳ ಕುರಿತಂತೆ ಹೊಂದಿರುವ ಜ್ಞಾನವನ್ನು ಒರೆಗೆ ಹಚ್ಚುವಂತಿರುತ್ತವೆ. ವಿಷಯದ ಗ್ರಹಿಕೆ, ಜ್ಞಾನ ಮತ್ತು ಹರವನ್ನು ಪರೀಕ್ಷೆಗೊಳಪಡಿಸಲಾಗುತ್ತದೆ. ಪರೀಕ್ಷಾ ತಯಾರಿ ಪರೀಕ್ಷೆಗೆ ಇನ್ನುಳಿದ ದಿನಗಳನ್ನು ಲೆಕ್ಕಹಾಕಿ, ಅದಕ್ಕೆ ಸೂಕ್ತವಾಗಿ ಪರೀಕ್ಷಾ ಸಿದ್ಧತಾ ವೇಳಾಪಟ್ಟಿಯನ್ನು ತಯಾರಿಸಿಕೊಳ್ಳಿ. ಯೋಧನೊಬ್ಬನ ಮುಖ್ಯವಾದ ಎರಡು ಆಯುಧಗಳೆಂದರೆ ಒಂದು ಸಮಯ ಮತ್ತೊಂದು ತಾಳ್ಮೆ. ನಿಮಗಿರುವ ಸಮಯದ ಪರಿಧಿಯಲ್ಲೇ ಅಧ್ಯಯನಕ್ಕೆ ತೆಗೆದಿರಿಸಬೇಕಾದ ಸಮಯವನ್ನು ಹೊಂದಿಸಿಕೊಳ್ಳಿ. ದಿನನಿತ್ಯ ಎರಡರಿಂದ ಮೂರು ಗಂಟೆ ಪರೀಕ್ಷಾ ಸಿದ್ಧತೆಗಾಗಿಯೇ ಮೀಸಲಿರಿಸಿ. ಸತತ ಪ್ರಯತ್ನ ಎಲ್ಲವನ್ನೂ ಸಾಧ್ಯವಾಗಿಸುತ್ತದೆ. ಆದ್ದರಿಂದ ತಾಳ್ಮೆ ಎಂಬ ಅಸ್ತ್ರ ನಿಮ್ಮನ್ನು ಯಶಸ್ಸಿನ ಕಡೆ ಖಂಡಿತವಾಗಿಯೂ ಕರೆದೊಯ್ಯುತ್ತದೆ. ಯುಜಿಸಿಯ ವೆಬ್‌ಸೈಟಿನಿಂದ ಪತ್ರಿಕೆ-1 ಮತ್ತು ಪತ್ರಿಕೆ-2 ರ ಪಠ್ಯಕ್ರಮವನ್ನು ಡೌನ್‌ಲೋಡ್ ಮಾಡಿಕೊಂಡು ಕಣ್ಣಾಡಿಸಿರಿ ಹಾಗೂ ಅದನ್ನು ಸಂಪೂರ್ಣವಾಗಿ ಮನನ ಮಾಡಿಕೊಳ್ಳಿ. ಪ್ರತಿಯೊಂದು ವಿಷಯ ವಸ್ತುವನ್ನು ಪಠ್ಯಕ್ರಮಾನುಸಾರ ಪಟ್ಟಿ ಮಾಡಿಕೊಂಡು ನಿಮಗೆ ಅರ್ಥವಾಗುವ ರೀತಿಯಲ್ಲಿ ಚಿಕ್ಕ-ಚಿಕ್ಕ ಟಿಪ್ಪಣಿಗಳನ್ನು ಪ್ರತ್ಯೇಕವಾಗಿ ಬರೆದಿಟ್ಟುಕೊಳ್ಳಿ. ಪರೀಕ್ಷೆ ಸನಿಹಕ್ಕೆ ಬಂದಾಗ ಈ ಟಿಪ್ಪಣಿಗಳೇ ನಿಮಗೆ ಅಮೂಲ್ಯ. ಸಾಮಾನ್ಯವಾಗಿ ಭಾಷಾ ಮತ್ತು ಸಮಾಜ ವಿಜ್ಞಾನ ವಿಷಯಗಳ ವಿದ್ಯಾರ್ಥಿಗಳಲ್ಲಿರುವ ಅಳುಕೆಂದರೆ ಮೊದಲ ಪತ್ರಿಕೆಯಲ್ಲಿ ಹೆಚ್ಚು ಅಂಕಗಳು ಬರುವುದಿಲ್ಲ ಅಥವಾ ಅನುತ್ತೀರ್ಣರಾಗುತ್ತೇವೆ ಎಂಬುದು. ಬೋಧನಾ ಮತ್ತು ಸಂಶೋಧನಾ ಸಾಮರ್ಥ್ಯ, ಸಂವಹನ, ತಾರ್ಕಿಕತೆ, ಸಂಖ್ಯಾತ್ಮಕ ವಿಶ್ಲೇಷಣೆ, ಮಾಹಿತಿ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಗಳ ಕುರಿತಂತೆ ಇರುವ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ. ಪರಿಕಲ್ಪನೆಗಳನ್ನು ಸಾಧ್ಯವಾದಷ್ಟು ಅರ್ಥಮಾಡಿಕೊಳ್ಳಿ. ಕಷ್ಟವೆನಿಸುವ ವಿಷಯಗಳಿಗೆ ಆದ್ಯತೆ ನೀಡಿ ಅಧ್ಯಯನಕ್ಕೆ ಒತ್ತು ನೀಡಿ. ಖಂಡಿತವಾಗಿ ಪತ್ರಿಕೆ-1ರಲ್ಲಿ ಉತ್ತಮ ಅಂಕ ಪಡೆಯಬಹುದು. ಪಠ್ಯವಸ್ತುವಿಗೆ ಅನುಗುಣವಾಗಿ ಕ್ರಮಬದ್ಧ ಅಧ್ಯಯನ ಸಿದ್ಧತೆ ಶುರುಮಾಡಿ. ಪರೀಕ್ಷಾ ಸಿದ್ಧತೆಯಲ್ಲಿ ಗಮನಿಸಬೇಕಾದ ಅಂಶವೆಂದರೆ ಪ್ರಮುಖ ಮತ್ತು ಕಠಿಣವಾದ ವಿಷಯಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಿ ಹಾಗೂ ಅದನ್ನು ಪ್ರತಿಸಲ ಪರಿಷ್ಕರಣೆಗೊಳಪಡಿಸಿ. ಖಂಡಿತ ಈ ಅಭ್ಯಾಸ ಎಲ್ಲಾ ವಿಷಯಗಳನ್ನು ನೆನಪಿನಲ್ಲಿಡಲು ಸಹಕಾರಿಯಾಗುತ್ತದೆ. ನೆಟ್ ಪರೀಕ್ಷೆಯ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿಕೊಂಡು ಅವುಗಳಿಗೆ ಉತ್ತರ ಹುಡುಕುತ್ತಾ ಹೋಗಿ. ನಂತರ ಆ ಪ್ರಶ್ನೆಪತ್ರಿಕೆಯ ಕೀ ಉತ್ತರಗಳೊಂದಿಗೆ ನಿಮ್ಮ ಉತ್ತರಗಳನ್ನು ತಾಳೆಮಾಡಿ ನೋಡಿ. ಇದು ನಿಮ್ಮ ಸಾಮರ್ಥ್ಯವನ್ನು ಅರಿಯಲು ಸಹಾಯ ಮಾಡುತ್ತದೆ. ಜೊತೆಗೆ ಅಂತರ್ಜಾಲದಲ್ಲಿ ಲಭ್ಯವಿರುವ ಯುಜಿಸಿ-ನೆಟ್‌ಗೆ ಸಂಬಂಧಿಸಿದ ಅಣಕು ಪರೀಕ್ಷೆಗಳನ್ನು ಎದುರಿಸಿ. ಈ ತರಹದ ಪರೀಕ್ಷೆಗಳು ನಿಮ್ಮಲ್ಲಿ ಆತ್ಮವಿಶ್ವಾಸವನ್ನು, ಓದುವ ಛಲವನ್ನು ಇಮ್ಮಡಿಗೊಳಿಸುತ್ತವೆ. ನಿಮ್ಮ ಸ್ನಾತಕೋತ್ತರ ಪದವಿ ವಿಷಯಕ್ಕೆ ಸಂಬಂಧಿಸಿದಂತೆ ಮೂಲ ಪರಿಕಲ್ಪನೆಗಳು, ಸಿದ್ಧಾಂತಗಳು ಮತ್ತು ಮುಖ್ಯ ವಿಷಯಗಳನ್ನು ಮತ್ತೊಮ್ಮೆ ಆಳವಾಗಿ ಅಭ್ಯಾಸ ಮಾಡಿ. ನಿಮ್ಮ ವಿಷಯದ ಅಧ್ಯಯನಕ್ಕೆ ಅವಶ್ಯವಿರುವ ಉತ್ತಮ ಪುಸ್ತಕಗಳನ್ನು ಪಟ್ಟಿಮಾಡಿ. ಆ ಪುಸ್ತಕಗಳನ್ನು ಕೊಂಡುಕೊಳ್ಳಿ, ಸಾಧ್ಯವಾಗದಿದ್ದರೆ ಗ್ರಂಥಾಲಯದ ಮೊರೆ ಹೋಗಿ. ಯುಜಿಸಿ ಪಠ್ಯಕ್ರಮಾನುಸಾರ ಅನೇಕ ಪುಸ್ತಕಗಳು ಮಾರುಕಟ್ಟೆಯಲ್ಲಿ ಮತ್ತು ಅಂತರ್ಜಾಲದಲ್ಲಿ ಲಭ್ಯವಿವೆ. ವಿಸ್ತೃತ ವಿಷಯ ವಸ್ತು ಮತ್ತು ಬಹು ಆಯ್ಕೆ ಪ್ರಶ್ನೆಗಳನ್ನೊಳಗೊಂಡ ಪುಸ್ತಕಗಳನ್ನು ಹೆಚ್ಚು ಅಧ್ಯಯನ ಮಾಡಿ. ನಿಮ್ಮ ಸ್ನಾತಕೋತ್ತರ ವಿಷಯಕ್ಕೆ ಸಂಬಂಧಿಸಿದ ಶಬ್ದಸಂಗ್ರಹ ಪುಸ್ತಕವೂ ನಿಮ್ಮ ಬಳಿ ಇರಲಿ. ಗುಂಪು ಚರ್ಚೆ ನಿಮ್ಮದೇ ಸಮಾನ ಮನಸ್ಕರ ಚಿಕ್ಕ ಅಧ್ಯಯನ ತಂಡ ರಚಿಸಿಕೊಂಡು ಗುಂಪು ಚರ್ಚೆಯಲ್ಲಿ ತೊಡಗಿಕೊಳ್ಳಿ. ನಿಮ್ಮ ಅಧ್ಯಯನ ಜ್ಞಾನವನ್ನು ಪರೀಕ್ಷಿಸಲು ಸ್ನೇಹಿತರೊಂದಿಗೆ ದಿನವೂ ನಿಗದಿತ ಸಮಯದಲ್ಲಿ ವಿಚಾರ/ ವಿಷಯ ವಿನಿಮಯ ನಡೆಸಿ. ಕಠಿಣ ಪ್ರಶ್ನೆಗಳನ್ನು ಮತ್ತು ಕಷ್ಟಕರ ವಿಷಯಗಳನ್ನು ಸುಲಭವಾಗಿ ಕಲಿಯಲು ಮತ್ತು ಅರ್ಥೈಸಿಕೊಳ್ಳಲು ಈ ವಿಧಾನ ಅನುಕೂಲಕರ. ಯುಜಿಸಿ-ನೆಟ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ದೊರೆಯಬೇಕಾದರೆ ನಿಮ್ಮಲ್ಲಿ ಸಾಕಷ್ಟು ಸಾಮರ್ಥ್ಯ ಮತ್ತು ಅಗತ್ಯ ಕೌಶಲಗಳೆರಡೂ ಇರಬೇಕು. ಅವುಗಳನ್ನು ಅವಿರತ ಪ್ರಯತ್ನದಿಂದ ನಿಮ್ಮದಾಗಿಸಿಕೊಳ್ಳಿ. ಜೊತೆಗೆ ಯಶಸ್ಸಿನ ಶಿಖರ ಮೆಟ್ಟಿ ನಿಲ್ಲಲು ಒಂದೆರಡು ತಿಂಗಳ ಶ್ರಮ ಸಾಲದು ಎಂಬ ವಾಸ್ತವವೂ ತಿಳಿದಿರಬೇಕು. ಇದೇ ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ಯುಜಿಸಿ-ರಾಷ್ಟ್ರೀಯ ಅರ್ಹತಾ ಪರೀಕ್ಷೆ(ನೆಟ್)ಯ ವೇಳಾಪಟ್ಟಿಯ ಪ್ರಕಾರ ಆನ್‌ಲೈನ್ ನೋಂದಣಿಯು ಸೆಪ್ಟೆಂಬರ್ 9ರಿಂದ ಆರಂಭವಾಗಿ ಅಕ್ಟೋಬರ್ 9ರವರೆಗೆ ಇರುತ್ತದೆ. ನವೆಂಬರ್ 9ರಂದು ಪ್ರವೇಶಪತ್ರ ಪಡೆಯಬೇಕಿದ್ದು, ಆನ್‌ಲೈನ್(ಕಂಪ್ಯೂಟರ್ ಆಧರಿತ ಪರೀಕ್ಷೆ) ಪರೀಕ್ಷೆಯು ಡಿಸೆಂಬರ್ 2ರಿಂದ 6 ರವರೆಗೆ ನಡೆಯುತ್ತದೆ. ಅಂತಿಮವಾಗಿ ಡಿಸೆಂಬರ್ 31ರಂದು ಫಲಿತಾಂಶ ಪ್ರಕಟಿಸಲಾಗುತ್ತದೆ.
References: (ಲೇಖಕರು ಸಹಾಯಕ ಪ್ರಾಧ್ಯಾಪಕರು, ಸಮಾಜಕಾರ್ಯ ವಿಭಾಗ,ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ, ಹಾವೇರಿ)