* ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ (ISRO) 2025 ಡಿಸೆಂಬರ್ 15 ರಂದು ಅಮೆರಿಕದ “ಬ್ಲೂಬರ್ಡ್–6” (BlueBird-6) ಉಪಗ್ರಹವನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡುವ ಮಹತ್ವದ ಮಿಷನ್‌ಗೆ ಅಂತಿಮ ಸಿದ್ಧತೆಗಳನ್ನು ನಡೆಸುತ್ತಿದೆ. ಇದು ಇಸ್ರೋ ಮತ್ತು ಅಮೆರಿಕದ ವಾಣಿಜ್ಯ ಬಾಹ್ಯಾಕಾಶ ಕ್ಷೇತ್ರದ ನಡುವೆ ನಡೆದಿರುವ ಅತ್ಯಂತ ಪ್ರಮುಖ ಸಹಕಾರಗಳಲ್ಲಿ ಒಂದಾಗಿದೆ.* AST SpaceMobile ಎಂಬ ಅಮೆರಿಕದ ಖಾಸಗಿ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಈ 6.5 ಟನ್ ತೂಕದ ಉಪಗ್ರಹವು ಪೂರ್ತಿ ವಾಣಿಜ್ಯ ಸಂವಹನ ಸೇವೆಗಳಿಗಾಗಿ ವಿನ್ಯಾಸಗೊಳಿಸಲ್ಪಟ್ಟಿದ್ದು, ವಿಶ್ವದ ಮೊದಲ ಸ್ಪೇಸ್-ಬೇಸ್ಡ್ ಮೊಬೈಲ್ ಬ್ರಾಡ್‌ಬ್ಯಾಂಡ್ ನೆಟ್ವರ್ಕ್ ನಿರ್ಮಾಣದ ಭಾಗವಾಗಿದೆ.* ಇಸ್ರೋ ಇದುವರೆಗೂ ಹೊತ್ತೊಯ್ದ ಅತ್ಯಂತ ಭಾರವಾದ ಅಮೆರಿಕದ ವಾಣಿಜ್ಯ ಉಪಗ್ರಹ ಇದಾಗಿದೆ. ಇದನ್ನು ಭಾರತದ ಅತ್ಯಂತ ಬಲಿಷ್ಠ ಉಡಾವಣೆ ವಾಹನವಾದ LVM3 (Launch Vehicle Mark–3) ರಾಕೆಟ್ ಮೂಲಕ ಲೋ ಪ್ರಥವಿ ಕಕ್ಷೆ (LEO) ಗೆ ಏರಿಸಲಾಗುವುದು.ಈ ಮಿಷನ್ ಯಶಸ್ವಿಯಾದರೆ, ಇಸ್ರೋ ಜಾಗತಿಕ ವಾಣಿಜ್ಯ ಉಡಾವಣೆ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ.* ಬ್ಲೂಬರ್ಡ್–6 ಉಪಗ್ರಹವು ದೂರದ ಪ್ರದೇಶಗಳು ಮತ್ತು ಸಮುದ್ರದ ಮಧ್ಯದಲ್ಲೂ ನೇರ ಮೊಬೈಲ್ ಸಂಪರ್ಕ ಒದಗಿಸುವ ಸಾಮರ್ಥ್ಯ ಹೊಂದಿದ್ದು, ಜಾಗತಿಕ ಸಂವಹನ ತಂತ್ರಜ್ಞಾನಕ್ಕೆ ಹೊಸ ಆಯಾಮ ನೀಡಲಿದೆ. ಈ ಉಡಾವಣೆ ಭಾರತ–ಅಮೆರಿಕ ಬಾಹ್ಯಾಕಾಶ ಸಹಕಾರದ ಮತ್ತೊಂದು ಮೈಲಿಗಲ್ಲಾಗಲಿದ್ದು, ಇಸ್ರೋ ತನ್ನ ವಾಣಿಜ್ಯ ಸಾಮರ್ಥ್ಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ತೋರಿಸಲು ದೊಡ್ಡ ಅವಕಾಶವಾಗಲಿದೆ.