ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರತಿಷ್ಠಿತ 'ಸಹಾಯಕ ಎಂಜಿನಿಯರ್' (Assistant Engineer - AE) ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಕಲ ಸಿದ್ಧತೆ ಮಾಡಿಕೊಂಡಿದ್ದು, ಇಂದಿನಿಂದ (ಜುಲೈ 4 ಮತ್ತು 5) ರಾಜ್ಯಾದ್ಯಂತ ಲಿಖಿತ ಪರೀಕ್ಷೆಗಳು ಆರಂಭವಾಗಿವೆ.
ಕೃಷಿ ಮಾರಾಟ ಇಲಾಖೆ, ಕೆಎಸ್‌ಎಸ್‌ಐಡಿಸಿ (KSSIDC) ಮತ್ತು ಬೆಂಗಳೂರು ಜಲಮಂಡಳಿಯಲ್ಲಿ (BWSSB) ಎಂಜಿನಿಯರ್ ಆಗಿ ಸೇವೆ ಸಲ್ಲಿಸಲು ಕನಸು ಕಾಣುತ್ತಿರುವ ಸಾವಿರಾರು ಅಭ್ಯರ್ಥಿಗಳಿಗೆ ಇದು ಮಹತ್ವದ ಘಟ್ಟವಾಗಿದೆ. ಪರೀಕ್ಷಾ ಕೇಂದ್ರಗಳ ಮಾಹಿತಿ, ವೃಂದವಾರು ದಿನಾಂಕ ಹಾಗೂ ಈ ಬಾರಿ ಮಾಡಲಾಗಿರುವ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ.
ಪರೀಕ್ಷಾ ದಿನಾಂಕ ಮತ್ತು ಕೇಂದ್ರಗಳ ವಿಂಗಡಣೆ
ಅಭ್ಯರ್ಥಿಗಳ ಅನುಕೂಲಕ್ಕಾಗಿ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಪರೀಕ್ಷೆಯನ್ನು ಕಲ್ಯಾಣ ಕರ್ನಾಟಕ ಮತ್ತು ಉಳಿಕೆ ಮೂಲ ವೃಂದ ಎಂದು ಎರಡು ಭಾಗಗಳಾಗಿ ನಡೆಸಲಾಗುತ್ತಿದೆ.
- ಕಲ್ಯಾಣ ಕರ್ನಾಟಕ ವೃಂದ (HK): ಈ ಭಾಗದ ಹುದ್ದೆಗಳಿಗೆ ಇಂದು (ಜುಲೈ 4) ಪರೀಕ್ಷೆ ನಡೆಯುತ್ತಿದೆ. ಅಭ್ಯರ್ಥಿಗಳು ಬೆಂಗಳೂರು ಮತ್ತು ಕಲಬುರಗಿಯ ಒಟ್ಟು 3 ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ.
- ಉಳಿಕೆ ಮೂಲ ವೃಂದ (RPC): ಈ ಭಾಗದ ಹುದ್ದೆಗಳಿಗೆ ನಾಳೆ (ಜುಲೈ 5) ಪರೀಕ್ಷೆ ನಿಗದಿಯಾಗಿದೆ. ಇದಕ್ಕಾಗಿ ಭಾರಿ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬೆಂಗಳೂರಿನಲ್ಲಿ ಗರಿಷ್ಠ 22 ಕೇಂದ್ರಗಳು, ಹುಬ್ಬಳ್ಳಿಯಲ್ಲಿ 6 ಕೇಂದ್ರಗಳು ಮತ್ತು ಕಲಬುರಗಿಯ 6 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಹೈಟೆಕ್ ಭದ್ರತೆ: ಕಮಾಂಡ್ ಸೆಂಟರ್‌ನಿಂದಲೇ ವೆಬ್ ಕಾಸ್ಟಿಂಗ್ ನಿಗಾ!
KEA ಪರೀಕ್ಷೆಗಳಲ್ಲಿ ಯಾವುದೇ ರೀತಿಯ ಅಕ್ರಮಗಳಿಗೆ ಆಸ್ಪದ ನೀಡಬಾರದು ಎಂಬ ನಿಟ್ಟಿನಲ್ಲಿ ಈ ಬಾರಿ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಲಾಗಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು, "ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ (Web Casting) ಕಡ್ಡಾಯಗೊಳಿಸಲಾಗಿದೆ. ಬೆಂಗಳೂರಿನ KEA ಕಚೇರಿಯಲ್ಲಿ ಸ್ಥಾಪಿಸಲಾಗಿರುವ 'ಕಮಾಂಡ್ ಸೆಂಟರ್' ಮುಖಾಂತರ ಪ್ರತಿ ಕೇಂದ್ರದ ಚಲನವಲನಗಳ ಮೇಲೆ ಹದ್ದಿನ ಕಣ್ಣು ಇಡಲಾಗುವುದು" ಎಂದು ತಿಳಿಸಿದ್ದಾರೆ.
ಸ್ಥಳೀಯ ಮಟ್ಟದಲ್ಲಿ ಬಿಗಿ ಬಂದೋಬಸ್ತ್: ಕೇವಲ ಕೇಂದ್ರ ಕಚೇರಿಯಿಂದ ಮಾತ್ರವಲ್ಲದೆ, ಆಯಾ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು (DC) ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು (SP) ಖುದ್ದಾಗಿ ಭದ್ರತೆಯ ಉಸ್ತುವಾರಿ ವಹಿಸಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಿದ್ದಾರೆ.
.jpg)
ಅಭ್ಯರ್ಥಿಗಳಿಗೆ KPSC Vaani ಕಡೆಯಿಂದ ಲಾಸ್ಟ್ ಮಿನಿಟ್ ಟಿಪ್ಸ್:
- ಅಗತ್ಯ ದಾಖಲೆಗಳು: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ KEA ಬಿಡುಗಡೆ ಮಾಡಿರುವ ಅಧಿಕೃತ ಪ್ರವೇಶ ಪತ್ರ (Hall Ticket) ಹಾಗೂ ಮೂಲ ಗುರುತಿನ ಚೀಟಿಯನ್ನು (ಆಧಾರ್/ಪ್ಯಾನ್/ಡ್ರೈವಿಂಗ್ ಲೈಸೆನ್ಸ್) ಮರೆಯದೆ ತೆಗೆದುಕೊಂಡು ಹೋಗಿ.
- ಡ್ರೆಸ್ ಕೋಡ್ ಪಾಲಿಸಿ: KEA ಸೂಚಿಸಿರುವ ಕಟ್ಟುನಿಟ್ಟಿನ ಡ್ರೆಸ್ ಕೋಡ್ ಪಾಲಿಸಿ. ಬ್ಲೂಟೂತ್, ಸ್ಮಾರ್ಟ್ ವಾಚ್, ಮೊಬೈಲ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೇಂದ್ರದೊಳಗೆ ಕೊಂಡೊಯ್ಯುವಂತಿಲ್ಲ.
- ಸಮಯ ಪಾಲನೆ: ಟ್ರಾಫಿಕ್ ದಟ್ಟಣೆ ಇರುವುದರಿಂದ ಪರೀಕ್ಷೆ ಆರಂಭವಾಗುವ ಕನಿಷ್ಠ 1 ಗಂಟೆಗೂ ಮುನ್ನ ನಿಮ್ಮ ಪರೀಕ್ಷಾ ಕೇಂದ್ರ ತಲುಪುವುದು ಉತ್ತಮ.
Comments