➤ ಭಾರತದಲ್ಲಿ ಪ್ರತಿವರ್ಷ ಜನವರಿ 24 ರಂದು 'ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ'ವನ್ನು ಆಚರಿಸಲಾಗುತ್ತದೆ. ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆ, ಲಿಂಗ ತಾರತಮ್ಯ ಮತ್ತು ದೌರ್ಜನ್ಯಗಳ ವಿರುದ್ಧ ಜಾಗೃತಿ ಮೂಡಿಸಿ, ಅವರ ಹಕ್ಕುಗಳನ್ನು ರಕ್ಷಿಸುವುದು ಈ ದಿನದ ಆಶಯವಾಗಿದೆ. 2008ರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮೊದಲ ಬಾರಿಗೆ ಈ ದಿನವನ್ನು ಆಚರಿಸಲು ನಿರ್ಧರಿಸಿತು. 1966ರ ಜನವರಿ 24 ರಂದು ಇಂದಿರಾ ಗಾಂಧಿಯವರು ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆ ಸವಿನೆನಪಿಗಾಗಿ ಮತ್ತು ಮಹಿಳಾ ಸಬಲೀಕರಣದ ಸಂಕೇತವಾಗಿ ಈ ದಿನಾಂಕವನ್ನು ಆಯ್ದುಕೊಳ್ಳಲಾಗಿದೆ.➤ ಆಚರಣೆಯ ಪ್ರಮುಖ ಉದ್ದೇಶಗಳು:-=> ಲಿಂಗ ಸಮಾನತೆ: ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಎಂಬ ತಾರತಮ್ಯವನ್ನು ಹೋಗಲಾಡಿಸುವುದು.=> ಭ್ರೂಣ ಹತ್ಯೆ ತಡೆ: ಹೆಣ್ಣು ಭ್ರೂಣ ಹತ್ಯೆಯನ್ನು ನಿಷೇಧಿಸಿ, ಇಳಿಮುಖವಾಗುತ್ತಿರುವ ಲಿಂಗಾನುಪಾತವನ್ನು ಸುಧಾರಿಸುವುದು.=> ಶಿಕ್ಷಣ ಮತ್ತು ಆರೋಗ್ಯ: ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ದೊರೆಯುವಂತೆ ಮಾಡುವುದು.=> ಸುರಕ್ಷತೆ: ಮನೆಯ ಒಳಗೆ ಮತ್ತು ಹೊರಗೆ ಹೆಣ್ಣು ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಿಸುವುದು ಹಾಗೂ ದೌರ್ಜನ್ಯ ತಡೆಗಟ್ಟುವುದು.➤ ಬಾಲ್ಯ ವಿವಾಹ ಇಳಿಕೆ: ಭಾರತದಲ್ಲಿ 2006ರಲ್ಲಿ ಶೇ. 47ರಷ್ಟಿದ್ದ ಬಾಲ್ಯ ವಿವಾಹದ ಪ್ರಮಾಣವು 2019-21ರ ವೇಳೆಗೆ ಶೇ. 23.3ಕ್ಕೆ ಇಳಿದಿದೆ. ಆದರೂ ಪಶ್ಚಿಮ ಬಂಗಾಳ, ಬಿಹಾರ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚಿದೆ.➤ ಮಹಿಳಾ ಸಾಕ್ಷರತೆ: 2023-24ರ ವರದಿಯಂತೆ ಭಾರತದ ಮಹಿಳಾ ಸಾಕ್ಷರತಾ ಪ್ರಮಾಣ ಶೇ. 74.6ಕ್ಕೆ ಏರಿಕೆಯಾಗಿದೆ. ವಿಶೇಷವಾಗಿ 15-24 ವರ್ಷದ ಯುವತಿಯರಲ್ಲಿ ಸಾಕ್ಷರತೆ ಶೇ. 96ರಷ್ಟಿರುವುದು ಆಶಾದಾಯಕವಾಗಿದೆ. ಕೇರಳ ರಾಜ್ಯವು ಮಹಿಳಾ ಸಾಕ್ಷರತೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ.➤ ಪ್ರಮುಖ ಸರ್ಕಾರಿ ಯೋಜನೆಗಳು: ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ:=> ಬೇಟಿ ಬಚಾವೋ, ಬೇಟಿ ಪಢಾವೋ: ಹೆಣ್ಣು ಮಕ್ಕಳ ರಕ್ಷಣೆ ಮತ್ತು ಶಿಕ್ಷಣಕ್ಕಾಗಿ.=> ಸುಕನ್ಯಾ ಸಮೃದ್ಧಿ ಯೋಜನೆ: ಹೆಣ್ಣು ಮಕ್ಕಳ ಭವಿಷ್ಯದ ಉಳಿತಾಯಕ್ಕಾಗಿ.=> ಮಾತೃ ವಂದನಾ ಯೋಜನೆ: ಗರ್ಭಿಣಿಯರು ಮತ್ತು ಬಾಣಂತಿಯರ ಪೌಷ್ಟಿಕಾಂಶಕ್ಕಾಗಿ.=> ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯ: ಗ್ರಾಮೀಣ ಹೆಣ್ಣು ಮಕ್ಕಳ ಶಿಕ್ಷಣ ಉತ್ತೇಜಿಸಲು.