Job Description: ➤ ಪ್ರತಿ ವರ್ಷ ಮೇ 16ರಂದು ಭಾರತದಾದ್ಯಂತ 'ರಾಷ್ಟ್ರೀಯ ಡೆಂಗೆ ದಿನ' (National Dengue Day) ಆಚರಿಸಲಾಗುತ್ತದೆ. ಸಾರ್ವಜನಿಕರಲ್ಲಿ ಡೆಂಗೆ ರೋಗ, ಅದರ ಅಪಾಯಗಳು ಮತ್ತು ತಡೆಗಟ್ಟುವ ಕ್ರಮಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು (Ministry of Health and Family Welfare) ಈ ದಿನವನ್ನು ಆಯೋಜಿಸುತ್ತದೆ. ವಿಶೇಷವಾಗಿ ಮುಂಗಾರು (ಮಳೆಗಾಲ) ಆರಂಭವಾಗುವ ಮುನ್ನವೇ ಈ ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಈ ದಿನವು ಸಾರ್ವಜನಿಕರನ್ನು ಹಾಗೂ ಆರೋಗ್ಯ ಇಲಾಖೆಯನ್ನು ಸಜ್ಜುಗೊಳಿಸುತ್ತದೆ.➤ ಈ ವರ್ಷದ ಅಧಿಕೃತ ಘೋಷವಾಕ್ಯ : ಡೆಂಗೆ ನಿಯಂತ್ರಣಕ್ಕಾಗಿ ಸಮುದಾಯದ ಭಾಗವಹಿಸುವಿಕೆ: ಪರಿಶೀಲಿಸಿ, ಸ್ವಚ್ಛಗೊಳಿಸಿ ಮತ್ತು ಮುಚ್ಚಿ(Community Participation for Dengue Control: Check, Clean and Cover) ➤ ಡೆಂಗೆಯು ಒಂದು ವೈರಲ್ ಜ್ವರವಾಗಿದ್ದು, ಇದು 'ಫ್ಲಾವಿವೈರಸ್' (Flavivirus) ಗುಂಪಿಗೆ ಸೇರಿದ ಡೆಂಗೆ ವೈರಸ್‌ನಿಂದ ಉಂಟಾಗುತ್ತದೆ. ಈ ಸಾಂಕ್ರಾಮಿಕ ರೋಗವು ಮುಖ್ಯವಾಗಿ 'ಈಡೀಸ್ ಈಜಿಪ್ಟಿ' (Aedes aegypti) ಎಂಬ ಸೋಂಕಿತ ಹೆಣ್ಣು ಸೊಳ್ಳೆಯ ಕಚ್ಚುವಿಕೆಯಿಂದ ಹರಡುತ್ತದೆ. ಈ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಮಾತ್ರ ಕಚ್ಚುತ್ತವೆ ಎಂಬುದು ಗಮನಾರ್ಹ ಸಂಗತಿ.➤ ರೋಗ ಹರಡುವ ಪ್ರಕ್ರಿಯೆ: ಡೆಂಗೆ ಸೋಂಕಿತ ವ್ಯಕ್ತಿಯನ್ನು ಕಚ್ಚಿದ ಈಡೀಸ್ ಸೊಳ್ಳೆಯು ಆರೋಗ್ಯವಂತ ವ್ಯಕ್ತಿಗೆ ಕಚ್ಚುವ ಮೂಲಕ ರೋಗ ಹರಡುತ್ತದೆ ಮತ್ತು ಸೊಳ್ಳೆ ಕಚ್ಚಿದ 3 ರಿಂದ 14 ದಿನಗಳ ನಂತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಇವು ಸಾಮಾನ್ಯವಾಗಿ ಏರ್ ಕೂಲರ್‌ಗಳು ಹಾಗೂ ಹೂವಿನ ಕುಂಡಗಳಂತಹ ಸ್ವಚ್ಛವಾದ ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ.➤ ಡೆಂಗೆ ರೋಗದ ಪ್ರಮುಖ ಲಕ್ಷಣಗಳು: ಡೆಂಗೆ ಸೋಂಕಿಗೆ ಒಳಗಾದ ನಾಲ್ಕರಲ್ಲಿ ಒಬ್ಬರು ಮಾತ್ರ ಅನಾರೋಗ್ಯಕ್ಕೆ ಒಳಗಾಗಲಿದ್ದು, ಕೆಲವರಲ್ಲಿ ತೀವ್ರ ಜ್ವರ, ಕಣ್ಣಿನ ಹಿಂಭಾಗದ ನೋವು, ಮೈ-ಕೈ ನೋವು ಹಾಗೂ ದದ್ದುಗಳಂತಹ ಸೌಮ್ಯ ಲಕ್ಷಣಗಳಿದ್ದರೆ, ಇನ್ನು ಕೆಲವರಲ್ಲಿ ನಿರಂತರ ಹೊಟ್ಟೆನೋವು, ವಾಂತಿ, ರಕ್ತಸ್ರಾವ ಮತ್ತು ಪ್ಲೇಟ್‌ಲೆಟ್‌ಗಳ ಕುಸಿತದಂತಹ ತೀವ್ರ ಸ್ವರೂಪದ ಲಕ್ಷಣಗಳು ಕಾಣಿಸಿಕೊಳ್ಳಬಹುದು.➤ ತಡೆಗಟ್ಟುವ ಕ್ರಮಗಳು ಮತ್ತು ಸಮುದಾಯದ ಪಾತ್ರ: ಮನೆ ಮತ್ತು ಸುತ್ತಮುತ್ತಲಿನ ಹಳೆಯ ಟೈರ್, ಕೂಲರ್ ಹಾಗೂ ನೀರಿನ ತೊಟ್ಟಿಗಳಲ್ಲಿ ಎಲ್ಲೂ ನೀರು ನಿಲ್ಲದಂತೆ ಸ್ವಚ್ಛಗೊಳಿಸಿ, ಬಿಗಿಯಾದ ಮುಚ್ಚಳದಿಂದ ಮುಚ್ಚುವ 'Check, Clean and Cover' ಸೂತ್ರವನ್ನು ಪಾಲಿಸುವುದರ ಜೊತೆಗೆ ಪೂರ್ಣ ತೋಳಿನ ಬಟ್ಟೆ ಮತ್ತು ಸೊಳ್ಳೆ ಪರದೆಗಳನ್ನು ಬಳಸಿ ವೈಯಕ್ತಿಕ ರಕ್ಷಣೆ ಮಾಡಿಕೊಳ್ಳುವುದೇ ಡೆಂಗೆ ತಡೆಗಟ್ಟುವ ಏಕೈಕ ಮಾರ್ಗವಾಗಿದೆ.