➤ ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಬ್ಯಾಂಕಿಂಗ್ ಇತಿಹಾಸದಲ್ಲೇ ಅತ್ಯಂತ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳಲು ಮುಂದಾಗಿದೆ. ಒಂದು ದಶಕದ ಹಿಂದೆ ನನೆಗುದಿಗೆ ಬಿದ್ದಿದ್ದ 'ಪ್ಲಾಸ್ಟಿಕ್ ಕರೆನ್ಸಿ ನೋಟುಗಳ': ಪ್ರಾಯೋಗಿಕ ಯೋಜನೆಯನ್ನು ಮರುಜೀವಗೊಳಿಸಲು ಆರ್‌ಬಿಐ ಸಜ್ಜಾಗಿದೆ. ದೇಶದಲ್ಲಿ ಡಿಜಿಟಲ್ ಪಾವತಿಗಳು ಹೆಚ್ಚಾಗುತ್ತಿದ್ದರೂ, ಭೌತಿಕ ನಗದು (Cash) ಬೇಡಿಕೆ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದ ಈ ಮಹತ್ವದ ಕ್ರಮ ಕೈಗೊಳ್ಳಲಾಗುತ್ತಿದೆ.
➤ ಪಾಲಿಮರ್ (ಪ್ಲಾಸ್ಟಿಕ್) ಕರೆನ್ಸಿ ನೋಟುಗಳು: ಪ್ರಸ್ತುತ ನಾವು ಬಳಸುತ್ತಿರುವ ನೋಟುಗಳನ್ನು ವಿಶೇಷ ಹತ್ತಿ ಕಾಗದದಿಂದ ತಯಾರಿಸಲಾಗುತ್ತದೆ. ಆದರೆ, ಪಾಲಿಮರ್ ನೋಟುಗಳನ್ನು 'ಸಿಂಥೆಟಿಕ್ ಪಾಲಿಮರ್'ಅಂದರೆ ಒಂದು ಬಗೆಯ ಪ್ಲಾಸ್ಟಿಕ್ ವಸ್ತುವಿನಿಂದ ಸಿದ್ಧಪಡಿಸಲಾಗುತ್ತದೆ. ಇವು ಸಾಮಾನ್ಯ ಕಾಗದದ ನೋಟುಗಳಿಗಿಂತ ಹೆಚ್ಚು ಬಾಳಿಕೆ ಬರುತ್ತವೆ ಮತ್ತು ಸುಲಭವಾಗಿ ಹರಿಯುವುದಿಲ್ಲ ಅಥವಾ ಹಾಳಾಗುವುದಿಲ್ಲ.
➤ ಆರ್‌ಬಿಐ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಲು ಮುಖ್ಯ ಕಾರಣಗಳು:
1.ನೋಟು ಮುದ್ರಣ ವೆಚ್ಚದ ಕಡಿತ : ಆರ್‌ಬಿಐನ ವಾರ್ಷಿಕ ವರದಿಯ ಪ್ರಕಾರ, ದೇಶದಲ್ಲಿ ನೋಟುಗಳ ಮುದ್ರಣ ವೆಚ್ಚ ವರ್ಷದಿಂದ ವರ್ಷಕ್ಕೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ.
- 2.023-24ರ ಆರ್ಥಿಕ ವರ್ಷದಲ್ಲಿ: ₹5,101.4 ಕೋಟಿ ಮುದ್ರಣ ವೆಚ್ಚವಾಗಿತ್ತು.
- 2.024-25ರ ಆರ್ಥಿಕ ವರ್ಷದಲ್ಲಿ: ಇದು ಬರೋಬ್ಬರಿ ₹6,372.8 ಕೋಟಿಗೆ ಏರಿಕೆಯಾಗಿದೆ.
ಪಾಲಿಮರ್ ನೋಟುಗಳ ಆರಂಭಿಕ ವೆಚ್ಚ ಹೆಚ್ಚಿದ್ದರೂ, ಅವು ದೀರ್ಘಕಾಲ ಬಾಳಿಕೆ ಬರುವುದರಿಂದ ದೀರ್ಘಾವಧಿಯಲ್ಲಿ ಮುದ್ರಣ ವೆಚ್ಚವನ್ನು ಗಣನೀಯವಾಗಿ ಉಳಿಸಬಹುದಾಗಿದೆ.
2. ಹರಿದ/ಹಾಳಾದ ನೋಟುಗಳ ವಿಲೇವಾರಿ ಸಮಸ್ಯೆ : ಸಾರ್ವಜನಿಕ ವಲಯದಲ್ಲಿ ಚಲಾವಣೆಯಾಗಿ ಹಾಳಾಗುವ ನೋಟುಗಳನ್ನು (Soiled Banknotes) ವಿಲೇವಾರಿ ಮಾಡುವುದು ಆರ್‌ಬಿಐಗೆ ದೊಡ್ಡ ಸವಾಲಾಗಿದೆ. 2024-25ರಲ್ಲಿ ಆರ್‌ಬಿಐ ಸುಮಾರು 2,380 ಕೋಟಿ (23.8 Billion) ಹಾಳಾದ ನೋಟುಗಳನ್ನು ಚಲಾವಣೆಯಿಂದ ಹೊರಹಾಕಿದೆ. ಇದರಲ್ಲಿ ₹500 ಮತ್ತು ₹100 ಮುಖಬೆಲೆಯ ನೋಟುಗಳೇ ಹೆಚ್ಚಾಗಿದ್ದವು.
3. ಗರಿಷ್ಠ ಮಟ್ಟ ತಲುಪಿದ ನಗದು ಚಲಾವಣೆ (Currency in Circulation - CiC): ಯುಪಿಐ (UPI) ನಂತಹ ಡಿಜಿಟಲ್ ಪಾವತಿಗಳು ದೇಶದಲ್ಲಿ ವೇಗವಾಗಿ ಬೆಳೆಯುತ್ತಿದ್ದರೂ, ಜನರ ಬಳಿ ಇರುವ ನಗದು ಹಣದ ಪ್ರಮಾಣ (CiC) ಮೇ 15 ರ ವೇಳೆಗೆ ಸಾರ್ವಕಾಲಿಕ ದಾಖಲೆಯ ₹42.86 ಟ್ರಿಲಿಯನ್ (ಲಕ್ಷ ಕೋಟಿ) ತಲುಪಿದೆ. ಈ ಹೆಚ್ಚುತ್ತಿರುವ ಬೇಡಿಕೆಯನ್ನು ನಿಭಾಯಿಸಲು ಬಾಳಿಕೆ ಬರುವ ನೋಟುಗಳ ಅಗತ್ಯವಿದೆ.
4. ಸಣ್ಣ ಮುಖಬೆಲೆಯ ನೋಟುಗಳ ರಕ್ಷಣೆ: ₹10 ಮತ್ತು ₹20 ಮುಖಬೆಲೆಯ ನೋಟುಗಳು ಅತಿ ಹೆಚ್ಚು ಕೈಬದಲಾಗುವುದರಿಂದ ಬೇಗನೆ ಕೊಳೆಯಾಗುತ್ತವೆ ಅಥವಾ ಹರಿದು ಹೋಗುತ್ತವೆ. ಪಾಲಿಮರ್ ತಂತ್ರಜ್ಞಾನವು ಇಂತಹ ಸಣ್ಣ ನೋಟುಗಳ ಜೀವಿತಾವಧಿಯನ್ನು ವಿಸ್ತರಿಸಲು ನೆರವಾಗಲಿದೆ.
➤ ಪ್ಲಾಸ್ಟಿಕ್ ನೋಟುಗಳ ಪ್ರಮುಖ ಅನುಕೂಲಗಳು:
- ದೀರ್ಘಾವಧಿ ಬಾಳಿಕೆ (Longer Lifespan): ಕಾಗದದ ನೋಟುಗಳಿಗೆ ಹೋಲಿಸಿದರೆ ಇವು ಕನಿಷ್ಠ 3 ರಿಂದ 5 ಪಟ್ಟು ಹೆಚ್ಚು ಕಾಲ ಬಾಳಿಕೆ ಬರುತ್ತವೆ.
- ಜಲನಿರೋಧಕ ಮತ್ತು ಧೂಳು ನಿರೋಧಕ: ಇವು ನೀರು, ಎಣ್ಣೆ ಅಥವಾ ಧೂಳಿನಿಂದ ಹಾಳಾಗುವುದಿಲ್ಲ. ಸ್ವಚ್ಛವಾಗಿಡಲು ಸುಲಭ.
- ನಕಲಿ ನೋಟು ತಡೆ (Anti-Counterfeiting): ಪಾಲಿಮರ್ ನೋಟುಗಳಲ್ಲಿ ಅತ್ಯಾಧುನಿಕ ಸೆಕ್ಯೂರಿಟಿ ಫೀಚರ್‌ಗಳನ್ನು (ಭದ್ರತಾ ವೈಶಿಷ್ಟ್ಯಗಳು) ಅಳವಡಿಸಲು ಸಾಧ್ಯವಿರುವುದರಿಂದ ನಕಲಿ ನೋಟುಗಳನ್ನು ತಯಾರಿಸುವುದು ಅಸಾಧ್ಯ.
- ಎಟಿಎಂ ಹೊಂದಾಣಿಕೆ: ಪ್ರಸ್ತುತ ದೇಶದಲ್ಲಿರುವ ಎಟಿಎಂ (ATM) ಯಂತ್ರಗಳು ಪ್ಲಾಸ್ಟಿಕ್ ನೋಟುಗಳನ್ನು ಸುಲಭವಾಗಿ ಗುರುತಿಸಿ, ಗ್ರಾಹಕರಿಗೆ ವಿತರಿಸುವಂತೆ ತಂತ್ರಜ್ಞಾನವನ್ನು ನವೀಕರಿಸಲು ಆರ್‌ಬಿಐ ಸಿದ್ಧತೆ ಮಾಡಿಕೊಂಡಿದೆ.
➤ ಭಾರತದ ಹಿಂದಿನ ಪ್ರಯೋಗ ಮತ್ತು ಜಾಗತಿಕ ಇತಿಹಾಸ:
- 2012ರ ಪ್ರಯತ್ನ: ಭಾರತ ಸರ್ಕಾರವು 2012ರಲ್ಲೇ ದೇಶದ 5 ಆಯ್ದ ನಗರಗಳಲ್ಲಿ ಪ್ರಾಯೋಗಿಕವಾಗಿ 100 ಕೋಟಿ ₹10 ಮುಖಬೆಲೆಯ ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರಲು ಅನುಮೋದನೆ ನೀಡಿತ್ತು. ಆದರೆ ಅಂದಿನ ತಾಂತ್ರಿಕ ಮಿತಿಗಳಿಂದಾಗಿ ಆ ಯೋಜನೆ ನೆನೆಗುದಿಗೆ ಬಿದ್ದಿತ್ತು.
- ವಿಶ್ವದಲ್ಲೇ ಮೊದಲು: ಜಗತ್ತಿನಲ್ಲಿ ಮೊದಲ ಬಾರಿಗೆ ಪ್ಲಾಸ್ಟಿಕ್ (ಪಾಲಿಮರ್) ಕರೆನ್ಸಿ ನೋಟುಗಳನ್ನು ಪರಿಚಯಿಸಿದ ದೇಶ ಆಸ್ಟ್ರೇಲಿಯಾ (1988).
- ಇತರ ದೇಶಗಳು: ಪ್ರಸ್ತುತ ವಿಶ್ವದ ಸುಮಾರು 60ಕ್ಕೂ ಹೆಚ್ಚು ದೇಶಗಳು (ಕೆನಡಾ, ಸಿಂಗಾಪುರ, ಮಲೇಷ್ಯಾ, ಥೈಲ್ಯಾಂಡ್ ಇತ್ಯಾದಿ) ಪಾಲಿಮರ್ ನೋಟುಗಳನ್ನು ಬಳಸುತ್ತಿವೆ. (ಗಮನಿಸಿ: ಅಮೆರಿಕದ ಡಾಲರ್ ನೋಟುಗಳನ್ನು ಹತ್ತಿ ಮತ್ತು ಲಿನಿನ್ ಮಿಶ್ರಣದಿಂದ ಮಾಡಲಾಗಿರುತ್ತದೆಯೇ ಹೊರತು ಪ್ಲಾಸ್ಟಿಕ್‌ನಿಂದಲ್ಲ).
➤ ಆರ್‌ಬಿಐ ಇತ್ತೀಚೆಗೆ ಪಾಟ್ನಾ ಮತ್ತು ಮುಂಬೈನಲ್ಲಿ ನಡೆಸಿದ ಆಡಳಿತ ಮಂಡಳಿ ಸಭೆಗಳಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ದೇಶದ ಪ್ರಮುಖ ನಗರಗಳಲ್ಲಿ ಪ್ರಾಯೋಗಿಕವಾಗಿ (Pilot Project) ಪ್ಲಾಸ್ಟಿಕ್ ನೋಟುಗಳನ್ನು ಬಿಡುಗಡೆ ಮಾಡಲಿದೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಭಾರತೀಯ ಕರೆನ್ಸಿ ವ್ಯವಸ್ಥೆಯಲ್ಲಿ ದೊಡ್ಡ ಕ್ರಾಂತಿಯಾಗಲಿದೆ.
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.