* ಭಾರತೀಯ ಸಂಶೋಧನಾ ಸಂಸ್ಥೆ (ISRO) ಇದೇ ಮೊದಲ ಬಾರಿಗೆ ತನ್ನ ದೇಶೀಯ ನಿರ್ಮಿತ ರಾಕೆಟ್ PSLV ಮೂಲಕ ಮೂರು ಪ್ರಯೋಗಗಳಿಗಾಗಿ 'ಜೈವಿಕ ಪದಾರ್ಥ'ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ.* ಪಿಎಸ್ಎಲ್ವಿ (ಪಿಒಇಎಂ-4) ಪಾಲಕ್ ಸೊಪ್ಪು, ಅಲಸಂದೆ ಬೀಜ ಹಾಗೂ ಗಟ್ ಬ್ಯಾಕ್ಟಿರಿಯಾವನ್ನು ಸಣ್ಣ ಗಾತ್ರದ ಸೀಲ್ಡ್ ಬಾಕ್ಸ್ನಲ್ಲಿ ಈ ತಿಂಗಳಾಂತ್ಯಕ್ಕೆ ಬಾಹ್ಯಾಕಾಶಕ್ಕೆ ಕೊಂಡೊಯ್ಯಲಿದೆ.* ಭೂಮಿಯ ಆಚೆಗೆ ಗುರುತ್ವ ಅಥವಾ ಕನಿಷ್ಠ ಗುರುತ್ವ ಇರುತ್ತದೆ. ಈ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಸ್ಯಕೋಶಗಳು ಹೇಗೆ ಬೆಳೆಯುತ್ತವೆ ಮತ್ತು ಆ ವಾತಾವರಣಕ್ಕೆ ಹೇಗೆ ಹೊಂದಿಕೊಳ್ಳುತ್ತವೆ ಎನ್ನುವುದನ್ನು 'ಅಮಿಟಿ ಪ್ಲಾಂಟ್ ಎಕ್ಸ್ ಪರಿಮೆಂಟಲ್ ಮಾಡ್ಯೂಲ್ ಇನ್ ಸ್ಪೇಸ್' (APEMS) ಪ್ರಯೋಗದ ಮೂಲಕ ಅಧ್ಯಯನ ಮಾಡಲಾಗುತ್ತದೆ.* ಪಾಲಕ್ ಸೊಪ್ಪನ್ನು ಬಳಸಿಕೊಂಡು ಕೋಶಗಳ ಬೆಳವಣಿಗೆಗೆ ಸಂಬಂಧಿಸಿದ ಬದಲಾವಣೆಗಳನ್ನು ಗಮನಿಸಲಾಗುತ್ತದೆ. ಇದಕ್ಕಾಗಿ 'ಪಿಎಸ್ಎಲ್ವಿ ಆರ್ಬಿಟಲ್ ಎಕ್ಸ್ ಪರಿಮೆಂಟಲ್ ಮಾಡ್ಯೂಲ್'ನಲ್ಲಿ ಮತ್ತು ಮುಂಬಯಿಯ ಅಮಿಟಿ ವಿಶ್ವವಿದ್ಯಾಲಯದಲ್ಲೇ ಇರುವ ನಿಯಂತ್ರಿತ ಲ್ಯಾಬ್ನ ಪರಿಸರದಲ್ಲಿ ಅಧ್ಯಯನ ಮಾಡಲಾಗುತ್ತದೆ.* ಪ್ರಯೋಗದಲ್ಲಿ LED ಬಳಸಿ ಬೆಳಕನ್ನು ನೀಡಲಾಗುತ್ತದೆ. ಅದೇ ರೀತಿಯಲ್ಲಿ ಜೆಲ್ ಮಾದರಿಯಲ್ಲಿ ಪೋಷಕಾಂಶವನ್ನು ಒದಗಿಸಲಾಗುತ್ತದೆ. ಬಣ್ಣ ಬೆಳವಣಿಗೆಗೆ ಸೇರಿದಂತೆ ಸಸ್ಯಕೋಶಗಳಲ್ಲಿನ ಯಾವುದೇ ಸಣ್ಣ ಬದಲಾವಣೆಯನ್ನೂ ಮಾಡ್ಯೂಲ್ ಒಳಗಡೆ ಅಳವಡಿಸಲಾಗಿರುವ ಕ್ಯಾಮೆರಾದ ಮೂಲಕ ರೆಕಾರ್ಡ್ ಮಾಡಲಾಗುತ್ತದೆ.* ಜೀವಕೋಶಗಳು ಸತ್ತರೆ ಅವುಗಳು ಬಣ್ಣವನ್ನು ಬದಲಾಯಿಸುತ್ತವೆ. ಇದು ಸಸ್ಯಗಳ ಆರೋಗ್ಯದ ಬಗೆಗಿನ ಸ್ಪಷ್ಟ ಸೂಚನೆಯಾಗಿದೆ. ಇದರ ಜತೆಗೆ ಮಾಡ್ಯೂಲ್ ಒಳಗಡೆ ಒತ್ತಡ, ಆರ್ದ್ರತೆ ಹಾಗೂ ಇಂಗಾಲದ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ಸೆನ್ಸಾರ್ ಅಳವಡಿಸಲಾಗಿದೆ. ಇದು ಸಸ್ಯದ ಬೆಳವಣಿಗೆಯ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ.