* ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಿನಿ ಹರಾಜು ಮಂಗಳವಾರ ( 16 December) ಅಬುಧಾಬಿಯಲ್ಲಿ ನಡೆದಿದ್ದು, ಈ ಬಾರಿ ಕೂಡ ಭರ್ಜರಿ ಮೊತ್ತಗಳು ಮತ್ತು ಅಚ್ಚರಿಯ ಆಯ್ಕೆಗಳು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದವು. ನಿರೀಕ್ಷೆಯಂತೆ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರಾನ್ ಗ್ರೀನ್ ಹರಾಜಿನ ಹೈಲೈಟ್ ಆಗಿ ಹೊರಹೊಮ್ಮಿದರು. ಅವರನ್ನು ಕೋಲ್ಕತ್ತ ನೈಟ್ ರೈಡರ್ಸ್ ತಂಡವು ₹25.20 ಕೋಟಿಗೆ ಖರೀದಿಸುವ ಮೂಲಕ ಹರಾಜಿನ ಅತ್ಯಧಿಕ ಮೊತ್ತ ದಾಖಲಿಸಿತು. ದುಬಾರಿ ಆಟಗಾರರನ್ನು ಸೆಳೆಯುವ ಕೋಲ್ಕತ್ತ ತಂಡದ ಪರಂಪರೆ ಈ ಬಾರಿ ಕೂಡ ಮುಂದುವರಿದಂತಾಯಿತು.* ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಶ್ರೀಲಂಕಾದ ವೇಗದ ಬೌಲರ್ ಮಥೀಶ್ ಪಥಿರಾಣ ಅವರನ್ನು ಕೂಡ ₹18 ಕೋಟಿಗೆ ಪಡೆದುಕೊಂಡು ಹರಾಜಿನಲ್ಲಿ ಎರಡನೇ ಅತ್ಯಧಿಕ ಬಿಡ್ ಸಾಧಿಸಿತು. ಅವರ ವೇಗ ಮತ್ತು ಡೆತ್ ಓವರ್‌ಗಳಲ್ಲಿ ಬೌಲಿಂಗ್ ಸಾಮರ್ಥ್ಯ ತಂಡಕ್ಕೆ ದೊಡ್ಡ ಶಕ್ತಿ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.* ಈ ಹರಾಜಿನಲ್ಲಿ ಅನ್‌ಕ್ಯಾಪ್ಡ್ ಆಟಗಾರರು ಇತಿಹಾಸ ಸೃಷ್ಟಿಸಿದರು. ರಾಜಸ್ಥಾನದ ಕಾರ್ತಿಕ್ ಶರ್ಮಾ ಹಾಗೂ ಉತ್ತರ ಪ್ರದೇಶದ ಪ್ರಶಾಂತ್ ವೀರ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ತಲಾ ₹14.20 ಕೋಟಿಗೆ ಖರೀದಿಸಿತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಪಡೆದ ಅನ್‌ಕ್ಯಾಪ್ಡ್ ಆಟಗಾರರೆಂಬ ಹೆಗ್ಗಳಿಕೆಯನ್ನು ಇಬ್ಬರೂ ಗಳಿಸಿದರು.* ಇಂಗ್ಲೆಂಡ್‌ನ ಶಕ್ತಿಶಾಲಿ ಬ್ಯಾಟ್ಸ್‌ಮನ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು ₹13 ಕೋಟಿಗೆ ಸೆಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಆಕ್ರಮಣಕಾರಿ ಆಟ ಆಡುವ ಅವರ ಸಾಮರ್ಥ್ಯ ತಂಡಕ್ಕೆ ಹೆಚ್ಚಿನ ಬಲ ನೀಡಲಿದೆ.* ಇದಕ್ಕೆ ನಡುವೆ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾರತೀಯ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು ₹7 ಕೋಟಿಗೆ ತನ್ನ ಬಳಗಕ್ಕೆ ಸೇರಿಸಿಕೊಂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡುವ ಶಕ್ತಿ ಹೊಂದಿರುವ ವೆಂಕಟೇಶ್ ಅಯ್ಯರ್, ಆರ್‌ಸಿಬಿ ತಂಡದ ಸಮತೋಲನ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಒಟ್ಟಾರೆ, ಈ ಐಪಿಎಲ್ ಮಿನಿ ಹರಾಜು ಭಾರೀ ಮೊತ್ತಗಳು, ಅಚ್ಚರಿಯ ಆಯ್ಕೆಗಳು ಮತ್ತು ಹೊಸ ದಾಖಲೆಗಳ ಮೂಲಕ ಕ್ರಿಕೆಟ್ ಲೋಕದಲ್ಲಿ ವಿಶೇಷ ಗಮನ ಸೆಳೆದಿದೆ.