* ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಯ 360 ಕಿ.ಮೀ. ಪೂರ್ಣಗೊಂಡಿದ್ದು,  ಸಮುದ್ರದೊಳಗಿನ ಸುರಂಗದ ಸುಮಾರು 2 ಕಿ.ಮೀ. ಮಾರ್ಗ ಪೂರ್ಣಗೊಂಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.* ಶನಿವಾರ(ಮಾರ್ಚ್ 01) ಗುಜರಾತ್‌ನ ಅಹಮದಾಬಾದ್ ರೈಲು ನಿಲ್ದಾಣದ ಪುನರಾಭಿವೃದ್ಧಿ ಯೋಜನೆಯ ಕಾಮಗಾರಿಯನ್ನು ಪರಿಶೀಲಿಸಿದ ನಂತರ ವೈಷ್ಣವ್‌ ಅವರು ಮಾತನಾಡಿದರು.* ಉದ್ಧವ್ ಠಾಕ್ರೆ ಅವಧಿಯಲ್ಲಿ ಅನುಮತಿ ನಿರಾಕರಣೆಯಿಂದ ಬುಲೆಟ್ ಪ್ರಾಜೆಕ್ಟ್‌ಗೆ 2.5 ವರ್ಷದ ವಿಳಂಬವಾಯಿತು. ಈಗ ಸರಿದೂಗಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಈ ಮಾರ್ಗವು ಮುಂಬೈ, ಸೂರತ್, ವಡೋದರಾ, ಅಹಮದಾಬಾದ್ ಸಂಪರ್ಕಿಸುತ್ತದೆ.* ಒಟ್ಟು 508 ಕಿ.ಮೀ. ಬುಲೆಟ್‌ ರೈಲು ಮಾರ್ಗ ಇದಾಗಿದ್ದು. ಗಂಟೆಗೆ ಸರಾಸರಿ 170 ಕಿ.ಮೀ. ವೇಗದಲ್ಲಿ ರೈಲು ಸಂಚರಿಸಲಿದೆ, 3 ಗಂಟೆಯ ಪ್ರಯಾಣ ಇದಾಗಲಿದ್ದು 1.08 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ.* ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಮಾರ್ಗದ ವಿದ್ಯುತೀಕರಣಕ್ಕಾಗಿ ಗುಜರಾತ್‌ನ ಸೂರತ್-ಬಿಲಿಮೋರಾ ನಡುವೆ 14 ಮೀ. ಎತ್ತರದ 2 ಉಕ್ಕಿನ ಸ್ತಂಭ ನಿರ್ಮಿಸಲಾಗಿದೆ.* ಈ ಕಾರಿಡಾರ್‌ನಲ್ಲಿ 20,000ಕ್ಕೂ ಅಧಿಕ 9.5-14.5 ಮೀ. ಉದ್ದದ ಕಂಬಗಳನ್ನು ಸ್ಥಾಪಿಸಲಾಗಿದ್ದು, ಅವು ವೈಯರ್‌, ಅರ್ಥಿಂಗ್‌, ಫಿಟ್ಟಿಂಗ್‌ ಮುಂತಾದವುಗಳಿಗೆ ಆಧಾರವಾಗಿರುತ್ತವೆ. ಜಪಾನಿನ ಮಾದರಿಯಲ್ಲಿ, ಮೇಕ್‌ ಇನ್‌ ಇಂಡಿಯಾ ನೀತಿಯಡಿ ಭಾರತದಲ್ಲಿಯೇ ಈ ಸ್ತಂಭಗಳನ್ನು ತಯಾರಿಸಲಾಗಿದೆ.* ಗುಜರಾತ್‌ನ ಖೇಡಾ ಜಿಲ್ಲೆಯ ನಾದಿಯಾದ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ-48ರ ಮೇಲೆ 210 ಮೀ.ನ ಸೇತುವೆ ಪೂರ್ಣಗೊಂಡಿದೆ. ಇದನ್ನು ಆನಂದ್ ಮತ್ತು ಅಹಮದಾಬಾದ್ ಬುಲೆಟ್ ರೈಲು ನಿಲ್ದಾಣಗಳ ನಡುವೆ ನಿರ್ಮಿಸಲಾಗಿದೆ.* 253 ಕಿ.ಮೀ. ಕಮಾನುಗಳು, 13 ನದಿಗಳ ಮೇಲಿನ ಸೇತುವೆಗಳು, 5 ಸ್ಟೀಲ್ ಸೇತುವೆಗಳು, 112 ಕಿ.ಮೀ. ಶಬ್ದ ತಡೆಗೋಡೆಗಳು ನಿರ್ಮಾಣಗೊಂಡಿವೆ. 21 ಕಿ.ಮೀ. ಸುರಂಗ ನಿರ್ಮಾಣ ಪ್ರಗತಿಯಲ್ಲಿ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ 7 ಪರ್ವತಗಳ ಮೂಲಕ ಸುರಂಗ ನಿರ್ಮಿಸಲಾಗುತ್ತಿದೆ.