* ಭಾರತ 2026ರಲ್ಲಿ ಮಹತ್ವಾಕಾಂಕ್ಷೆಯ ಮಾನವ ಸಹಿತ ಗಗನಯಾನದೊಂದಿಗೆ ಆಳಸಮುದ್ರ ಯಾನಕ್ಕೂ ಸಿದ್ಧತೆ ನಡೆಸುತ್ತಿದೆ. ಗಗನಯಾನದ ಭಾಗವಾಗಿ ಗಗನಾನಿಗಳ ತಂಡವು ಬಾಹ್ಯಾಕಾಶಕ್ಕೆ ಪ್ರಯಾಣಿಸಲಿದೆ.* ಆಳ ಸಮುದ್ರದ ರಹಸ್ಯಗಳನ್ನು ತಿಳಿಯುವ ನಿಟ್ಟಿನಲ್ಲಿ ಭಾರತ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಸಂಶೋಧನೆ ಉದ್ದೇಶದಿಂದ ಮಾನವ ಸಹಿತ ಗಗನಯಾನದ ಜೊತೆಗೆ 2026ರ ಆರಂಭಕ್ಕೆ ಆಳ ಸಮುದ್ರಕ್ಕೆ ಮಾನವನನ್ನು ಕಳುಹಿಸಲು ಭಾರತ ಯೋಜಿಸಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಭೂವಿಜ್ಞಾನ ಖಾತೆ ರಾಜ್ಯ ಸಚಿವ (ಸ್ವತಂತ್ರ) ಡಾ.ಜಿತೇಂದ್ರ ಸಿಂಗ್ ಗುರುವಾರ(ಡಿಸೆಂಬರ್ 26) ಹೇಳಿದ್ದಾರೆ.* 2004ರಲ್ಲಿ ಕಾಣಿಸಿಕೊಂಡಿದ್ದ 'ಹಿಂದೂ ಮಹಾಸಾಗರ ಸುನಾಮಿ'ಯ 20ನೇ ಸ್ಮರಣಾರ್ಥ ಇಂಡಿಯನ್ ನ್ಯಾಷನಲ್ ಸೆಂಟರ್ ಫಾರ್ ಓಷನ್ ಇನ್ಫಾರ್ಮೇಷನ್ ಸರ್ವಿಸಸ್ನಲ್ಲಿ (ಐಎನ್ಸಿಒ ಐಎಸ್) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಜಿತೇಂದ್ರ ಸಿಂಗ್ ಅವರು ಮಾತನಾಡಿ ತಿಳಿಸಿದ್ದಾರೆ.* ಇದರ ಜೊತೆಗೆ ಆಳಸಮುದ್ರ ಯಾನ, ಸಮುದ್ರದ 6 ಕಿ.ಮೀ ಆಳಕ್ಕೆ "ಸಮುದ್ರಯಾನ್" ಎಂಬ ಕಾರ್ಯಾಚರಣೆಯಡಿ, ಭಾರತೀಯ ವಿಜ್ಞಾನಿಗಳಿಂದ ನಡೆಸಲಾಗಲಿದೆ. ಈ ಯಾನವು ಸಮುದ್ರದ ಜೀವ ವೈವಿಧ್ಯತೆ ಮತ್ತು ಸಂಪತ್ತಿನ ಅಧ್ಯಯನಕ್ಕಾಗಿ ಮಹತ್ವದ ಹೆಜ್ಜೆ.* ಸಾಗರದಲ್ಲಿ ಸುಮಾರು 6,000 ಮೀಟರ್ ಆಳದವರೆಗೆ ತೆರಳಲು ಸ್ವಯಂ ಚಾಲಿತ ಸಬ್ಮರ್ಸಿಬಲ್ (ಸಮುದ್ರದಡಿ ಸಂಚರಿಸುವ ನೌಕೆ) ಅಭಿವೃದ್ಧಿಪಡಿಸುವ ಗುರಿ ಹೊಂದಿರುವ 'ಸಮುದ್ರಯಾನ' ಯೋಜನೆಯಲ್ಲಿ ಮೂವರು ತಜ್ಞರು ಪಾಲ್ಗೊಳ್ಳಲಿದ್ದಾರೆ.* ಇದು ನೀರಿನಲ್ಲಿ 12 ಗಂಟೆಗಳ ಕಾರ್ಯಾಚರಣೆ ಮಾಡಬಲ್ಲದು. ತುರ್ತು ಸಂದರ್ಭಗಳಲ್ಲಿ 96 ಗಂಟೆಗಳ ಕಾಲ ಕೆಲಸ ಮಾಡುವ ಸಾಮರ್ಥ್ಯವನ್ನು ಕೂಡ ಹೊಂದಿದೆ. ಈ ಮಾನವ ಸಹಿತ ಸಬ್ಮರ್ಸಿಬಲ್ ಇದುವರೆಗೆ ಅನ್ವೇಷಿಸದ ಆಳ ಸಮುದ್ರ ಪ್ರದೇಶಗಳನ್ನು ವೀಕ್ಷಿಸಲು ಸಿಬ್ಬಂದಿಗೆ ಅನುವು ಮಾಡಿಕೊಡಲಿದೆ.